ಗೂಡ್ಸ್ ಆಟೋಗೆ ಮೆಕ್ಕೆಜೋಳ ತುಂಬುತ್ತಿರುವುದು. 
ಜಿಲ್ಲೆ

ರೈತರಿಗೆ ಲಾಭ ತಂದ ಮೆಕ್ಕೆಜೋಳ

ಎಚ್.ಡಿ. ಕೋಟೆ: ವರ್ಷಕ್ಕೆ 4 ಬಾರಿ ನೀರಾವರಿ ಆಶ್ರಯದಲ್ಲಿ ಮೆಕ್ಕೆಜೋಳ ಬೆಳೆದು ಕಟಾವು ಮಾಡಿ, ನೆರೆಯ ಕೇರಳಕ್ಕೆ ಮಾರುವುದರ ಮೂಲಕ ತಾಲೂಕಿನ ರೈತರು ಹೆಚ್ಚು ಆದಾಯ ಗಳಿಸುತ್ತಿದ್ದು, ಆ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಂಡಿದ್ದಾರೆ.

ತಾಲೂಕಿನ ಬೆಳಗನಹಳ್ಳಿ ಗ್ರಾಮದ ರೈತರು ತಮ್ಮ ನೀರಾವರಿಯುಳ್ಳ ಜಮೀನುಗಳಲ್ಲಿ ಮೆಕ್ಕೆಜೋಳ ಬೆಳೆದು ಹೆಚ್ಚು ಬಲಿಯದ ರೀತಿ ನೋಡಿಕೊಂಡು ಹದಕ್ಕೆ ಬಂದ ಜೋಳವನ್ನು ಕಟಾವು ಮಾಡಿ ಕೇರಳದ ವ್ಯಕ್ತಿಗಳಿಗೆ ಮಾರುತ್ತಿದ್ದಾರೆ. ಕೇರಳದಲ್ಲಿ ಹೆಚ್ಚಿನವರು ಹೈನುಗಾರಿಕೆ ನಡೆಸುತ್ತಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಹೀಗಾಗಿ ತಾಲೂಕಿನಲ್ಲಿ ಜೋಳ ಬೆಳೆದಿರುವ ರೈತರಿಂದ ಹಸಿ ಮೆಕ್ಕೆಜೋಳವನ್ನು ಹೆಚ್ಚು ಖರೀದಿಸುತ್ತಿದ್ದಾರೆ.

ಗ್ರಾಮದಲ್ಲಿ 50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳವನ್ನು ಬೆಳೆದಿದ್ದು, ಸಾಮಾನ್ಯವಾಗಿ ಮೆಕ್ಕೆಜೋಳ ಬಲಿತು ಕಟಾವಿಗೆ ಬರಲು ಮೂರೂವರೆ ತಿಂಗಳು ಬೇಕು. ಆದರೆ ಇಲ್ಲಿ ರೈತರು ಎರಡೂವರೆ ತಿಂಗಳಿಗೆ ಮೆಕ್ಕೆಜೋಳವನ್ನು ಕಡ್ಡಿ ಸಮೇತ ಕಟಾವು ಮಾಡಿ ತೂಕದ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದು, ಒಂದು ಟನ್ ಜೋಳಕ್ಕೆ 1900 ರಿಂದ 2000 ರೂ. ಪಡೆಯುತ್ತಿದ್ದಾರೆ.

ಎಕರೆಗೆ ಸುಮಾರು 19 ರಿಂದ 20 ಟನ್ ಕಡ್ಡಿ ದೊರೆಯುತ್ತಿದ್ದು, ರೈತ ಎಕರೆಗೆ 35 ರಿಂದ 40 ಸಾವಿರ ರೂ.ವರೆಗೆ ಗಳಿಸುತ್ತಿದ್ದಾನೆ. ಬಿತ್ತನೆ ಮಾಡಿದ ದಿನದಿಂದ ಮೋತೆ ಬರುವರೆಗೂ ಗೊಬ್ಬರ, ಉಳುಮೆ, ಬಿತ್ತನೆಯೆಲ್ಲಾ ಸೇರಿ ಸುಮಾರು 8 ಸಾವಿರ ರೂ. ಖರ್ಚಾಗುತ್ತಿದ್ದು, 30 ರಿಂದ 35 ಸಾವಿರ ರೂ.ವರೆಗೆ ಎಕರೆಗೆ ಲಾಭ ದೊರೆಯುತ್ತಿದೆ.

ಮೆಕ್ಕೆಜೋಳವನ್ನು ಪೂರ್ಣ ಪ್ರಮಾಣದಲ್ಲಿ ಬೆಳೆದು ಕಟಾವು ಮಾಡಿ ಜೋಳವನ್ನು ಬಿಡಿಸಿ ಮಾರುಕಟ್ಟೆ ತೆರಳಿ ಮಾರಿದರೆ ಖರ್ಚು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಎಕರೆಗೆ 15 ರಿಂದ 16 ಕ್ವಿಂಟಾಲ್ ಜೋಳ ಬರುತ್ತದೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 1 ಸಾವಿರ ರೂ. ಇದ್ದು, ಎಕರೆಗೆ 15 ಸಾವಿರ ರೂ. ದೊರೆಯುತ್ತದೆ. ಕಟಾವು ಮುಗಿಸುವವರೆಗೆ 15 ಸಾವಿರ ರೂ. ಖರ್ಚಾಗುತ್ತದೆ. ಆದ್ದರಿಂದ ಕಡ್ಡಿ ಮಾರಿ ಲಾಭ ಗಳಿಸಬಹುದು ಎನ್ನುವುದು ಮೆಕ್ಕೆಜೋಳ ಬೆಳೆದ ರೈತರ ಅಭಿಪ್ರಾಯ.

ಕಟಾವು ಮಾಡುವವರಿಗೂ ಲಾಭ: ಮೆಕ್ಕೆ ಜೋಳವನ್ನು ಕತ್ತರಿಸಲು ಗುತ್ತಿಗೆ ಆಧಾರದಲ್ಲಿ ಮೆಕ್ಕೆ ಜೋಳ ಕೊಂಡುಕೊಳ್ಳುವವರು ಕೂಲಿಗಾರರಿಗೆ ನೀಡುತ್ತಿದ್ದು, ಜೋಳವನ್ನು ಕತ್ತರಿಸಿ 20 ಕೆ.ಜಿ.ಯಂತೆ ಕಂತೆ ಮಾಡಿ ಗಾಡಿ ತುಂಬಲು ಒಂದು ಟನ್‌ಗೆ 500 ರೂ. ನೀಡುತ್ತಿದ್ದು, ಇದರಿಂದ ಕೂಲಿಗಾರರಿಗೂ ಲಾಭವಾಗುತ್ತಿದೆ. ದಿನವೊಂದಕ್ಕೆ 4 ಜನರುಳ್ಳ ಕೂಲಿಗಾರರ ತಂಡವೊಂದು 10 ರಿಂದ 12 ಟನ್ ಜೋಳವನ್ನು ಕತ್ತರಿಸಿ ತೂಕ ಮಾಡಿ ಕಂತೆ ಕಟ್ಟಿ ಗಾಡಿಗೆ ತುಂಬುತ್ತಿದ್ದಾರೆ. ಒಬ್ಬ ಕೂಲಿಕಾರ ದಿನವೊಂದಕ್ಕೆ 1 ರಿಂದ ಒಂದೂವರೆ ಸಾವಿರ ರೂ. ಸಂಪಾದಿಸುತ್ತಿದ್ದು, ಲಾಕ್‌ಡೌನ್ ದಿನಗಳಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದೇವೆ ಎಂದು ಬೆಳಗನಹಳ್ಳಿಯ ರೈತ ಭೈರೇಗೌಡ ಹೇಳುತ್ತಾರೆ.

ಕೇರಳದಲ್ಲಿ ಬೇಡಿಕೆ: ಕೇರಳದ ಮಾನಂದವಾಡಿ, ವೈನಾಡು ಪಟ್ಟಣ ಮತ್ತು ನಗರ ಪ್ರದೇಶಗಳ ಮನೆಗಳಲ್ಲಿ ಹಾಲಿಗಾಗಿ ಹಸುಗಳನ್ನು ಸಾಕಿಕೊಂಡಿದ್ದು, ಮೇವಿಗೆ ಬೇಡಿಕೆ ಇದೆ. ಇಲ್ಲಿನ ರೈತರು ಜೋಳ ಬೆಳೆದಿರುವ ಬಗ್ಗೆ ಮಾಹಿತಿ ಪಡೆದು ರೈತರಿಗೆ ಒಪ್ಪುವ ರೀತಿ ಬೆಲೆ ನಿಗದಿಪಡಿಸಿ ಖರೀದಿಸುತ್ತಿದ್ದೇವೆ, ಜತೆಗೆ 20 ಕೆಜಿ ಕಂತೆಗಳನ್ನು ಇಲ್ಲಿಂದಲೇ ಮಾಡಿಕೊಳ್ಳುತ್ತಿದ್ದು ವೈನಾಡು ಹಾಗೂ ಮಾನಂದವಾಡಿ ಪಟ್ಟಣಗಳಲ್ಲಿ ಕಂತೆ ಲೆಕ್ಕದಲ್ಲಿ ಮಾರಾಟ ಮಾಡುವುದರಿಂದ ನಮಗೂ ತಕ್ಕಮಟ್ಟಿಗೆ ಲಾಭ ದೊರೆಯುತ್ತಿದೆ ಎಂದು ಮಾನಂದವಾಡಿಯ ಗೂಡ್ಸ್ ಆಟೋ ಮಾಲೀಕ ಶ್ರೀಕಾಂತ್ ಮಾಹಿತಿ ನೀಡುತ್ತಾರೆ.

11ಊಆಏ2
ಗೂಡ್ಸ್ ಆಟೋಗೆ ಮೆಕ್ಕೆಜೋಳ ತುಂಬುತ್ತಿರುವುದು.