ಧಾರವಾಡ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು 2020ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಮಂಜೂರಾತಿ ನೀಡಿದೆ. ಕೃಷಿ ಇಲಾಖೆ ಅಧಿಕಾರಿಗಳು ಮತ್ತು ವಿಮಾ ಕಂಪನಿ ಪ್ರತಿನಿಧಿಗಳು ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಯೋಜನೆ ಕುರಿತು ರೈತರಿಗೆ ಪೂರಕ ಮಾಹಿತಿ ಹಾಗೂ ತಿಳಿವಳಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಯೋಜನೆ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಕೃಷಿ, ಲೀಡ್ ಬ್ಯಾಂಕ್, ತೋಟಗಾರಿಕೆ, ವಿಮಾ ಕಂಪನಿ ಮತ್ತು ಜಿಲ್ಲಾ ಅಂಕಿಸಂಖ್ಯೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಮುಖ್ಯ ಹಾಗೂ ಇತರ ಬೆಳೆಗಳನ್ನು ತಾಲೂಕುವಾರು ಪರಿಗಣಿಸಿ ಆಯಾ ತಾಲೂಕಿನ ಮುಖ್ಯ ಬೆಳೆಗಳಿಗೆ ಗ್ರಾಪಂ, ನಗರ ಸ್ಥಳೀಯ ಸಂಸ್ಥೆಗಳನ್ನು ವಿಮಾ ಘಟಕವಾಗಿ ಹಾಗೂ ಇತರ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವಾಗಿ ಪರಿಗಣಿಸಿ ವಿವಿಧ ಆಹಾರ, ಎಣ್ಣೆ ಕಾಳು, ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳನ್ನು ಪಟ್ಟಿ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಕೂಡಲೆ ಬ್ಯಾಂಕ್ಗಳು ರೈತರ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಬೇಕು. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಬೆಳೆ ಸಾಲದ ಪ್ರಮಾಣದ ಆಧಾರದ ಮೇಲೆ ಸರ್ಕಾರದಿಂದ ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಈಗಾಗಲೇ ಆರಂಭವಾಗಿದ್ದು, ರೈತರಿಗೆ ವಿಮಾ ಯೋಜನೆಗಳ ಕುರಿತ ಪೂರ್ಣ ಮಾಹಿತಿಯನ್ನು ನೀಡಿ ಪ್ರತಿ ರೈತರು ನೋಂದಾಯಿಸುವಂತೆ ಮತ್ತು ವಿಮೆಯ ಲಾಭ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ. ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಯೋಜನೆಯನ್ನು ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಲು ವಿಮಾ ಕಂಪನಿ ಪ್ರತಿನಿಧಿಗಳ ಜತೆಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ಸೂಚಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಕರಪತ್ರ ಮತ್ತು ಬ್ಯಾನರ್ಗಳನ್ನು ಅಳವಡಿಸಿ ಇಲಾಖೆ ಸಿಬ್ಬಂದಿ ಮೂಲಕ ಗ್ರಾಮ ಮಟ್ಟದಲ್ಲಿ ತಿಳಿವಳಿಕೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಈಶ್ವರನಾಥ, ಕೃಷಿ ಇಲಾಖೆ ಉಪನಿರ್ದೇಶಕ ಮಂಜುನಾಥ ಅಂತರವಳ್ಳಿ, ಕೃಷಿ ಅಧಿಕಾರಿ ಮಂಜುನಾಥ ಹೂಗಾರ, ವಿಮಾ ಕಂಪನಿ ಪ್ರತಿನಿಧಿ ವಿಜಯಾನಂದ ಬೆಲ್ಲದ, ತೋಟಗಾರಿಕೆ ಇಲಾಖೆಯ ಅಜಿತಕುಮಾರ, ಜಿಲ್ಲಾ ಸಾಂಖಿಕ ಅಧಿಕಾರಿ ಸಾಯಿಕುಮಾರ ಎಸ್. ಹಳ್ಳಿ, ಸಹಾಯಕ ಸಾಂಖಿಕ ನಿರ್ದೇಶಕ ಎಂ.ಕೆ. ತಳವಾರ, ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ವಿ.ವಿ. ಪಡಸಲಗಿ, ಇತರರು ಇದ್ದರು.