ಜಿಲ್ಲೆ

ರೈತರಿಗೆ ಪರಿಹಾರ ವಿತರಣೆ ವಿಳಂಬ

ಸವಣೂರ: ಅತಿವೃಷ್ಟಿಯಿಂದ ನೊಂದ ರೈತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಕುರಿತು ತಾ.ಪಂ. ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಅವರು ತೋಟಗಾರಿಕೆ ತಾಲೂಕು ಸಹಾಯಕ ನಿರ್ದೇಶಕ ವಿನೋದ ಅವರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡರು.

ತಾ.ಪಂ. ಸಭಾಭವನದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ, ‘ಸರ್ಕಾರದ ವಿಳಂಬ ನೀತಿಯಿಂದಾಗಿ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ತೋಟಗಾರಿಕೆ ಹಾಗೂ ತರಕಾರಿ ಬೆಳೆಗಾರರಿಗೆ ಪರಿಹಾರ ದೊರಕುತ್ತಿಲ್ಲ’ ಎಂದು ತೋಟಗಾರಿಕೆ ತಾಲೂಕು ಸಹಾಯಕ ನಿರ್ದೇಶಕ ವಿನೋದ ಸಮಜಾಯಿಷಿ ನೀಡುತ್ತಿದ್ದಂತೆ ಆಕ್ರೋಶಗೊಂಡ ಸದಸ್ಯರು, ‘ಇಂತಹ ಅಧಿಕಾರಿಗಳಿಂದಲೇ ರೈತರಿಗೆ ಮಾಹಿತಿ ಕೊರತೆ ಎದುರಾಗುತ್ತಿದೆ. ಜನಪ್ರತಿನಿಧಿಗಳಿಗೂ ಇವರು ಗೌರವ ಕೊಡುತ್ತಿಲ್ಲ. ಸಭೆಗೆ ಗೈರು ಹಾಜರಾಗುವ ಮೂಲಕ ಹಾರಿಕೆ ಉತ್ತರ ನೀಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಡಿ ಎಸ್.ಎಚ್. ಅಮರಾಪೂರ ಮಾತನಾಡಿ, ಸಭೆಗೆ ಸರಿಯಾಗಿ ಆಗಮಿಸಿ, ಸೂಕ್ತ ಮಾಹಿತಿ ನೀಡಿ. ಮುಂದಿನ ಬಾರಿ ಹೀಗೆಲ್ಲ ಮಾತನಾಡಬೇಡಿ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ವಿನೋದ ಅವರಿಗೆ ಸೂಚಿಸಿದರು.

ತಾ.ಪಂ. ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಮಾತನಾಡಿ, ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಮುಂದಿನ ಮೂರು ತಿಂಗಳ ಒಳಗಾಗಿ ಜಲಜೀವನ ಯೋಜನೆಯಡಿ ಮಕ್ಕಳಿಗೆ ಕುಡಿಯುವ ನೀರು ಪೂರೈಸಲು ಸರ್ಕಾರ ಕಾರ್ಯಕ್ರಮ ರೂಪಿಸಿದೆೆ. ಜಲ ಜೀವನ ಯೋಜನೆಯಡಿಯಲ್ಲಿ ತಾಲೂಕಿನ 103 ಶಾಲೆಗಳಿಗೆ 100 ದಿನದೊಳಗಾಗಿ ನಲ್ಲಿಗಳ ಮೂಲಕ ನೀರು ಪೂರೈಸಬೇಕು. ಸರ್ಕಾರದ ಆದೇಶದಂತೆ ಕೂಡಲೆ ಜಿ.ಪಂ. ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪ್ರವೃತ್ತವಾಗಬೇಕು ಎಂದು ಶಿಕ್ಷಣ ಇಲಾಖೆ ಹಾಗೂ ಜಿ.ಪಂ. ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಿದ ರೈತರು ಜಿಪಿಎಸ್ ಮಾಡಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಪರದಾಡುವಂತಹ ಸ್ಥಿತಿ ಎದುರಾಗಿದೆ. ಈ ಕುರಿತು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಅಧ್ಯಕ್ಷರು ಪ್ರಶ್ನಿಸಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಬಸನಗೌಡ ಪಾಟೀಲ ಮಾತನಾಡಿ, ರೈತರಿಂದ ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಹೊಲಕ್ಕೆ ತೆರಳಿ ಜಿಪಿಎಸ್ ಕೈಗೊಳ್ಳುತ್ತಿದ್ದಾರೆ. ನಂತರ, ಹಂತ ಹಂತವಾಗಿ ಪರಿಹಾರ ವಿತರಿಸಲಾಗುವುದು. ಇದರಲ್ಲಿ ಯಾವುದೇ ಗೊಂದಲವಾಗದ ರೀತಿಯಲ್ಲಿ ಕಾರ್ಯ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

ಉಪಾಧ್ಯಕ್ಷೆ ಜಯಶೀಲಾ ರೊಟ್ಟಿಗವಾಡ, ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಾ ವಗ್ಗನವರ, ಇಒ ಮುನಿಯಪ್ಪ ಪಿ., ಎಡಿ ಎಸ್.ಎಚ್. ಅಮರಾಪೂರ, ಇತರರು ಇದ್ದರು.