ಹೇಮಣ್ಣ ಕುರಹಟ್ಟಿ ಅಣ್ಣಿಗೇರಿ
ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸ್ಥಳೀಯ ಎಪಿಎಂಸಿ ಆರಂಭಿಸಿರುವ ಹತ್ತಿ ಖರೀದಿ ಕೇಂದ್ರದಲ್ಲಿ ರೈತರ ಹೆಸರು ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ, ರೈತರು ದಿನಗಟ್ಟಲೇ ಕಾಯುವ ಪರಿಸ್ಥಿತಿ ಈಗ ತಪ್ಪಿದೆ.
ಭಾರತೀಯ ಹತ್ತಿ ನಿಗಮವು (ಸಿಸಿಐ) ಅಣ್ಣಿಗೇರಿ ಎಪಿಎಂಸಿಯಲ್ಲಿ ನ. 13ರಿಂದ ಹತ್ತಿ ಖರೀದಿ ಕೇಂದ್ರ ಆರಂಭಿಸಿದೆ. ಪ್ರತಿ ಕ್ವಿಂಟಾಲ್ಗೆ 5550 ರೂ. ದರವಿದೆ. ಖರೀದಿ ಕೇಂದ್ರ ತೆರೆದ ಆರಂಭದಲ್ಲಿ ಇಲ್ಲಿ ದಿನಕ್ಕೆ ಹತ್ತಿ ತುಂಬಿದ 100ರಿಂದ 150ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳು ಸರದಿಯಲ್ಲಿ ನಿಲ್ಲುತ್ತಿದ್ದವು. ಅವುಗಳನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಆಗುತ್ತಿರಲಿಲ್ಲ. ಆಗ ರೈತರು ತಮ್ಮ ಸರದಿ ಬರುವುದು ತಡವಾಗಿ 2-3 ದಿನ ಕಾದು ಕುಳಿತುಕೊಳ್ಳಬೇಕಾಗಿತ್ತು. ಸದ್ಯ ಹೆಸರು ನೋಂದಾಯಿಸುವ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಯಾವಾಗ ಹತ್ತಿ ತರಬೇಕು ಎಂಬುದನ್ನು ಅಧಿಕಾರಿಗಳೇ ಫೋನ್ ಮಾಡಿ ತಿಳಿಸುತ್ತಿದ್ದಾರೆ. ಇದರಿಂದಾಗಿ ರೈತರು ಎಪಿಎಂಸಿಗೆ ಬಂದು ಪಾಳೆಯದಲ್ಲಿ ನಿಲ್ಲುವುದು ತಪ್ಪಿದೆ.
ಅಣ್ಣಿಗೇರಿ, ನವಲಗುಂದ ತಾಲೂಕುಗಳ ಮಧ್ಯವಿರುವ ಏಕೈಕ ಹತ್ತಿ ಖರೀದಿ ಕೇಂದ್ರ ಇದಾಗಿದೆ. ಖಾಸಗಿ ಫ್ಯಾಕ್ಟರಿಗಳಲ್ಲಿ ಕೇಳಿದಷ್ಟು ಬೆಲೆಗೆ ಹತ್ತಿ ಕೊಟ್ಟು ಕೈ ಸುಟ್ಟುಕೊಳ್ಳುವುದಕ್ಕಿಂತ ಇಲ್ಲಿಗೆ ಬರುವುದೇ ಉತ್ತಮ ಎಂದರಿತು ಉಭಯ ತಾಲೂಕಿನ 63 ಹಳ್ಳಿಗಳ ರೈತರು ಇಲ್ಲಿಗೆ ಬರುತ್ತಿದ್ದಾರೆ. ಹೀಗಾಗಿ, ರೈತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ.
ಸಿಸಿಐದವರು ಅಣ್ಣಿಗೇರಿಯ ವಿ.ಎಸ್. ಹುಬ್ಬಳ್ಳಿ ಜಿನ್ನಿಂಗ್ ಫ್ಯಾಕ್ಟರಿ, ದಿ ಅಣ್ಣಿಗೇರಿ ಅಗ್ರಿಪ್ರೋಡಿಸ್ ಕೋ ಆಪರೇಟಿವ್ ಸೊಸೈಟಿ, ಗದಗ ಶಿವರತ್ನ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಗಳನ್ನು ಹತ್ತಿ ಖರೀದಿಗೆ ಬಳಸುತ್ತಿದ್ದಾರೆ. ನಿತ್ಯ 40ರಿಂದ 50 ಗಾಡಿಗಳ ಹತ್ತಿ ಖರೀದಿಸಲಾಗುತ್ತಿದೆ. ಜ. 8ರವರೆಗೆ ಹತ್ತಿ ಮಾರಾಟಕ್ಕೆ 2035ಕ್ಕೂ ಹೆಚ್ಚು ರೈತರು ಹೆಸರು ನೋಂದಾಯಿಸಿದ್ದಾರೆ.
ಗುಣಮಟ್ಟ ಪರೀಕ್ಷೆ: ಸರ್ಕಾರದ ನಿಯಮಾವಳಿ ಪ್ರಕಾರ ಹತ್ತಿ ತೇವಾಂಶ ಶೇ. 8ರಿಂದ ಶೇ. 12ರೊಳಗೆ ಇದ್ದರೆ ಮಾತ್ರ ಸಿಸಿಐ ಅಧಿಕಾರಿಗಳು ಖರೀದಿಸುತ್ತಾರೆ. ಹತ್ತಿ ಗುಣಮಟ್ಟ (ಗ್ರೇಡಿಂಗ್) ಆಧರಿಸಿ ಅಧಿಕಾರಿಗಳು ಬೆಲೆ ನಿಗದಿಪಡಿಸುತ್ತಾರೆ.
2014-15ರಲ್ಲಿ ಅಣ್ಣಿಗೇರಿ ಎಪಿಎಂಸಿಯಲ್ಲಿನ ಕೇಂದ್ರದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ಗೆ 5500 ರೂ. ದರದಲ್ಲಿ ರೈತರಿಂದ 378820 ಕ್ವಿಂಟಾಲ್ ಹತ್ತಿ ಖರೀದಿಸಲಾಗಿತ್ತು. 2019-20ನೇ ಸಾಲಿನಲ್ಲಿ ಸಿಸಿಐ ಬೆಂಬಲ ಬೆಲೆ ಯೋಜನೆಯಡಿ 2019ರ ನ. 13ರಿಂದ 2020ರ ಜ. 7ರವರೆಗೆ 2012 ರೈತರಿಂದ 44715.85 ಕ್ವಿಂಟಾಲ್ ಹತ್ತಿ ಖರೀದಿಸಿದೆ.
ಈ ಬಾರಿ ರೈತರು ಹೆಚ್ಚು ಹತ್ತಿ ಬೆಳೆದಿದ್ದಾರೆ. ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕಿನ ರೈತರು ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಮಾರಾಟ ಮಾಡುತ್ತಿದ್ದಾರೆ. ಹತ್ತಿ ಬೆಳೆ ಮುಗಿಯುವವರೆಗೂ ಸಿಸಿಐದಿಂದ ಹತ್ತಿ ಖರೀದಿಸಲಾಗುವುದು. ರೈತರು ಅಣ್ಣಿಗೇರಿ ಎಪಿಎಂಸಿಯಲ್ಲಿ ಹೆಸರು ನೋಂದಾಯಿಸಬೇಕು. | ಗುರುನಾಥಗೌಡ ಉಳ್ಳೇಗಡ್ಡಿ, ಅಧ್ಯಕ್ಷ, ಎಪಿಎಂಸಿ, ಅಣ್ಣಿಗೇರಿ
ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿಸುತ್ತಿರುವುದರಿಂದ ರೈತರಿಗೆ ಅನುಕೂಲವಾಗುತ್ತಿದೆ. ಕಡಿಮೆ ಬೆಲೆಗೆ ಮಾರಾಟ ಮಾಡುವುದು ತಪ್ಪಿದೆ. | ಮೈಲಾರಪ್ಪ ದೇವೇಂದ್ರಪ್ಪ ಬೂದಿಹಾಳ, ರೈತ, ಕೋಳಿವಾಡ ಗ್ರಾಮ
ಹತ್ತಿ ನಮಗೆ ಬೆಳ್ಳಿ ಇದ್ದ ಹಾಗೆ. ಅದಕ್ಕೆ ಬೆಂಬಲ ಬೆಲೆ ಯೋಜನೆಯಡಿ ಬಂಗಾರದಂತಹ ದರ ಸಿಕ್ಕಿದೆ. ಖಾಸಗಿ ಹತ್ತಿ ಫ್ಯಾಕ್ಟರಿಗಳಲ್ಲಿ ಕೇಳಿದ ದರಕ್ಕೆ ನೀಡಿ ಕೈ ಸುಟ್ಟುಕೊಳ್ಳುವುದು ತಪ್ಪಿದೆ. | ಸೋಮಪ್ಪ ಶಂಕ್ರಪ್ಪ ಸೋಮಣ್ಣವರ, ರೈತ, ಅಣ್ಣಿಗೇರಿ