ಬೀದರ್: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಉದ್ದು, ಹೆಸರು ಖರೀದಿಗೆ ಸರ್ಕಾರ ಮುಂದಾಗಿರುವುದು ರೈತರಲ್ಲಿ ಖುಷಿ ತಂದಿದೆ. ಆದರೆ ಖರೀದಿಗೆ ಕಮ್ಮಿ ಗುರಿ ನಿಗದಿ ಮಾಡಿರುವುದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.
ಉದ್ದು ಮತ್ತು ಹೆಸರು ಉತ್ಪಾದನೆಗೆ ಹೋಲಿಸಿದರೆ ಖರೀದಿ ಪ್ರಮಾಣ ತೀರ ಕಡಿಮೆ ಇರುವುದು ಹಾಗೂ ಪ್ರತಿ ರೈತರಿಂದ ಇಂತಿಷ್ಟೇ ಕ್ವಿಂಟಾಲ್ ಖರೀದಿ ಮಿತಿ ಹೇರಿರುವುದು ಗೊಂದಲ ಸೃಷ್ಟಿಸಿದೆ. ಕರೊನಾ ಹಾಗೂ ಅತಿವೃಷ್ಟಿಯಿಂದ ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ಇಂಥ ನಿಯಮಗಳು ಮತ್ತಷ್ಟು ಸಮಸ್ಯೆಗೆ ತಳ್ಳುವಂತೆ ಮಾಡಿವೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಹೆಸರನ್ನು 7,196 ರೂ. ಹಾಗೂ ಉದ್ದು 6000 ರೂ.ಗೆ ಖರೀದಿಸಲು ನಿರ್ಧರಿಸಿದೆ. ಬೀದರ್ ಸೇರಿ ರಾಜ್ಯದ 10 ಜಿಲ್ಲೆಗಳಲ್ಲಿ ಹೆಸರು ಹಾಗೂ ಬೀದರ್ ಸೇರಿ 7 ಜಿಲ್ಲೆಗಳಲ್ಲಿ ಉದ್ದು ಖರೀದಿಸಲು ಅನುಮತಿ ಸಿಕ್ಕಿದೆ. ಎಲ್ಲ ಜಿಲ್ಲೆಗಳಿಂದ ಸೇರಿಸಿ 21,725 ಟನ್ ಹೆಸರು, 6,575 ಟನ್ ಉದ್ದು ಖರೀದಿಗೆ ಗರಿಷ್ಠ ಮಿತಿ ನಿಗದಿಗೊಳಿಸಿ ಸಹಕಾರ ಇಲಾಖೆ ಆದೇಶಿಸಿದೆ. ಬೆಳೆ ಉತ್ಪನ್ನಕ್ಕೆ ಹೋಲಿಸಿದರೆ ಖರೀದಿ ಮಿತಿ ಬಹಳ ಕಮ್ಮಿ. ಹೀಗಾಗಿ ಯಾವ ರೈತರ ಎಷ್ಟು ಮಾಲು ಖರೀದಿ ಕೇಂದ್ರಕ್ಕೆ ಹೋಗಲಿದೆ? ಸರ್ಕಾರದ ಯೋಜನೆ ಎಷ್ಟು ರೈತರಿಗೆ ಲಾಭ ತರಲಿದೆ ಎಂದು ಹೇಳದಂತಾಗಿದೆ.
ಪ್ರತಿ ಎಕರೆ ಹಾಗೂ ಒಬ್ಬ ರೈತರಿಂದ ಗರಿಷ್ಠ 4 ಕ್ವಿಂಟಾಲ್ ಹೆಸರು ಹಾಗೂ ಎಕರೆಗೆ ಮೂರು ಅಥವಾ ಪ್ರತಿ ರೈತರಿಂದ ಗರಿಷ್ಠ 6 ಕ್ವಿಂಟಾಲ್ ನಂತೆ ಉದ್ದು ಕಾಳು ಮಾತ್ರ ಖರೀದಿಸಲಾಗುತ್ತದೆ. 30 ದಿನಗಳವರೆಗೆ ನೋಂದಣಿ ಹಾಗೂ ನೋಂದಣಿ ಜತೆ ಖರೀದಿ ಕಾಲಾವಧಿಯನ್ನು 60 ದಿನದವರೆಗೆ ನಿಗದಿಪಡಿಸಲಾಗಿದೆ. ಖರೀದಿ ಮಿತಿಯಿಂದ ಗೊಂದಲಕ್ಕೆ ಸಿಲುಕಿದ ರೈತರು, ಕೂಡಲೇ ಸರ್ಕಾರ ಮಿತಿ ನಿಗದಿಪಡಿಸಿರುವ ಆದೇಶ ವಾಪಸ್ ಪಡೆಯುವ ಬೇಡಿಕೆ ಮಂಡಿಸಿದ್ದಾರೆ.
ಖರೀದಿ ಮಿತಿ ಲೆಕ್ಕಾಚಾರದಲ್ಲಿ ಯಾರ ಉದ್ದು, ಹೆಸರು ಖರೀದಿ ಕೇಂದ್ರಕ್ಕೆ ಹೋಗುತ್ತವೆ? ಯಾರದು ಉಳಿಯುತ್ತದೆಯೋ ಗೊತ್ತಾಗದಂತಿದೆ. 10 ಜಿಲ್ಲೆ ಸೇರಿಸಿ 21,725 ಟನ್ ಹೆಸರು ಖರೀದಿಗೆ ಮಿತಿ ಹೇರಲಾಗಿದೆ. ಗಮನಿಸುವ ಅಂಶವೆಂದರೆ ಒಂದೆರಡು ಜಿಲ್ಲೆಗಳಲ್ಲೇ ಇದಕ್ಕಿಂತ ಹೆಚ್ಚು ಉತ್ಪಾದನೆ ಗುರಿ ಇದೆ. ರಾಜ್ಯದ ಬದಲಾಗಿ ಜಿಲ್ಲಾ ಮಟ್ಟದಲ್ಲಿನ ಉತ್ಪಾದನೆ ಗಮನಿಸಿ ಸರ್ಕಾರ ಮಿತಿ ನಿಗದಿಪಡಿಸುವುದು ಉತ್ತಮ ಎನ್ನುತ್ತಾರೆ ಅನ್ನದಾತರು.
ಮಾರುಕಟ್ಟೆಯಲ್ಲೂ ಉತ್ತಮ ದರ
ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡರೆ ಮಾತ್ರ ರೈತರು ಖರೀದಿ ಕೇಂದ್ರಗಳತ್ತ ಚಿತ್ತ ಹರಿಸುತ್ತಾರೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಲೆ ಸುತ್ತಮುತ್ತವೇ ಸದ್ಯ ಮಾರುಕಟ್ಟೆಯಲ್ಲಿ ಹೆಸರು ಹಾಗೂ ಉದ್ದು ಬೆಳೆಗಳ ಧಾರಣೆ ಇದೆ. ಕ್ವಿಂಟಾಲ್ ಹೆಸರಿಗೆ 7,196 ರೂ. ಕೇಂದ್ರ ನಿಗದಿಪಡಿಸಿದೆ. ಮಾರುಕಟ್ಟೆಯಲ್ಲೂ ಗುಣಮಟ್ಟದ ಹೆಸರಿಗೆ 7200 ರೂ. ಇದೆ. ಕ್ವಿಂಟಾಲ್ ಉದ್ದಿಗೆ 6000 ರೂ. ಬೆಂಬಲ ಬೆಲೆ ಇದೆ. ಆದರೆ ಮಾರುಕಟ್ಟೆಯಲ್ಲಿ 6000ಕ್ಕೂ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿಯದಿದ್ದರೆ ಹೆಸರು ಹಾಗೂ ಉದ್ದು ಬೆಳೆಗಾರರು ಖರೀದಿ ಕೇಂದ್ರದ ಕಡೆಗೆ ಹೋಗುವುದು ಕಮ್ಮಿ ಎಂದೇ ಹೇಳಬಹುದು.
ಜಿಲ್ಲೆಯಲ್ಲಿ 60 ಖರೀದಿ ಕೇಂದ್ರ
ರೈತರಿಗೆ ಅನುಕೂಲವಾಗುವಂತೆ ಗ್ರಾಮೀಣ ಭಾಗದಲ್ಲಿ ಲಭ್ಯ ಸದೃಢ ಸಂಸ್ಥೆಗಳ ಮುಖಾಂತರ ಹೆಸರು ಮತ್ತು ಉದ್ದಿನ ಕಾಳುಗಳನ್ನು ಖರೀದಿಸಲು 60 ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ತಿಳಿಸಿದ್ದಾರೆ. ಹೆಸರು, ಉದ್ದು ಖರೀದಿ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ಕೇಂದ್ರದ ಕನಿಷ್ಠ ಬೆಂಬಲ ಬಲೆ ಯೋಜನೆ ಮತ್ತು ರಾಜ್ಯ ಸಹಕಾರ ಇಲಾಖೆ ಇತ್ತೀಚಿನ ಆದೇಶದಂತೆ ಜಿಲ್ಲೆಯಲ್ಲಿ ಮಾಕ್೯ಫೆಡ್ ಏಜೆನ್ಸಿ ಮೂಲಕ ಕಾಳುಗಳನ್ನು ಖರೀದಿಸಲು ಆದೇಶ ಹೊರಡಿಸಲಾಗಿದೆ ಎಂದರು. ಹೆಸರು ಕಾಳು ಪ್ರತಿ ಎಕರೆ/ರೈತರಿಂದ ಗರಿಷ್ಠ 4 ಕ್ವಿಂಟಾಲ್, ಉದ್ದು ಎಕರೆಗೆ ಮೂರು ಕ್ವಿಂಟಾಲ್, ಪ್ರತಿ ರೈತನಿಂದ ಗರಿಷ್ಠ 6 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಆಧಾರ್ ಕಾಡ್೯ನ್ನು ಬ್ಯಾಂಕ್ ಖಾತೆಯೊಂದಿಗೆ ಸೀಡೇಡ್ ಮಾಡಿದ ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಆದ ರೈತರು ಖರೀದಿ ಕೇಂದ್ರದಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಬೇಕು. ರೈತರು ನೋಂದಣಿಗಾಗಿ ಬೆಳೆ ದರ್ಶಕದಲ್ಲಿ ಮಾಹಿತಿ ಲಭ್ಯ ಇಲ್ಲದಿದ್ದರೆ ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಆಗದಿದ್ದರೆ ಖರೀದಿಗೆ ಒತ್ತಾಯ ಮಾಡದೆ ಸಹಕರಿಸಲು ಕೋರಿದರು. ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಅಪರ ಡಿಸಿ ರುದ್ರೇಶ ಗಾಳಿ, ಎಸಿ ಗರೀಮಾ ಪನ್ವಾರ್, ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ತುಳಸಿರಾಮ ಲಾಖೆ ಇದ್ದರು.
ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಖರೀದಿ ಕೇಂದ್ರದಲ್ಲಿ ಪರಸ್ಪರ ಅಂತರ ಮತ್ತು ನೈರ್ಮಲ್ಯ ಕಾಪಾಡಬೇಕು. ವೈರಸ್ ಹರಡುವಿಕೆ ತಡೆಗಟ್ಟುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕರ ನೀಡಿದ ಸೂಚನೆ ಕಡ್ಡಾಯ ಪಾಲಿಸಬೇಕು. ಖರೀದಿಸಿದ ಉತ್ಪನ್ನ ಕೇಂದ್ರದಲ್ಲಿ ನೆಲದ ಮೇಲೆ ಮತ್ತು ಗೋಡೆಗೆ ಅಂಟಿಕೊಂಡು ಚೀಲಗಳನ್ನು ಇಡಬಾರದು. ಎಲ್ಲ ಕೇಂದ್ರಗಳಲ್ಲಿ ಇಲೆಕ್ಟ್ರಾನಿಕ್ಸ್ ಡಿಜಿಟಲ್ ತೂಕದ ಯಂತ್ರ ಬಳಸಬೇಕು.
| ರಾಮಚಂದ್ರನ್, ಜಿಲ್ಲಾಧಿಕಾರಿ
ಉದ್ದು, ಹೆಸರು ಖರೀದಿಗೆ ಮಿತಿ ಹೇರುವ ಮೂಲಕ ಸರ್ಕಾರ ಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ಅನ್ಯಾಯ ಮಾಡುತ್ತಿದೆ. ಬೆಳೆಯ ಒಟ್ಟು ಉತ್ಪನ್ನದ ಅಂಶ ಅವಲೋಕಿಸದೆ ಖರೀದಿ ಮಿತಿ ಹೇರುವುದು ಅವೈಜ್ಞಾನಿಕ. ರೈತರು ಬೆಳೆದ ಧಾನ್ಯ ಖರೀದಿ ಪೂರ್ಣ ಆಗುವವರೆಗೆ ಕೇಂದ್ರ ತೆರೆದಿಡಬೇಕು. ಹೆಸರು, ಉದ್ದಿನ ಜತೆಗೆ ಸೋಯಾಬೀನ್ ಸಹ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ರೈತರ ಹಿತದ ಬೇಡಿಕೆಗೆ ನಿರ್ಲಕ್ಷಿಸಿದರೆ ಹೋರಾಟ ಅನಿವಾರ್ಯ.
| ಮಲ್ಲಿಕಾರ್ಜುನ ಸ್ವಾಮಿ
ರೈತ ಸಂಘದ ಜಿಲ್ಲಾಧ್ಯಕ್ಷ
ಉದ್ದು, ಹೆಸರು ಖರೀದಿಸುವ ಸಂಬಂಧ ಸಹಕಾರ ಇಲಾಖೆ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ರೈತರಿಗೆ ಅನುಕೂಲವಾಗುವಂತೆ ಅಗತ್ಯ ಇರುವ ಕಡೆಗಳಲ್ಲಿ ಕೇಂದ್ರ ಆರಂಭಿಸಿ ನೋಂದಣಿ, ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು.
| ತುಳಸಿರಾಮ ಲಾಖೆ
ಕೃಷಿ ಮಾರಾಟ ಇಲಾಖೆ, ಸಹಾಯಕ ನಿರ್ದೇಶಕ