ಜಿಲ್ಲೆ

ರೈತರಿಗೆ ಅನ್ಯಾಯವಾಗದಂತೆ ಸೂಕ್ತ ಪರಿಹಾರ ಒದಗಿಸಿ:ಸಂಸದ ಪ್ರಜ್ವಲ್ ರೇವಣ್ಣ

ಹಾಸನ: ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಸ್ವಾಧೀನವಾಗಿದ್ದು, ರೈತರಿಗೆ ಅನ್ಯಾಯವಾಗದಂತೆ ಸೂಕ್ತ ಪರಿಹಾರ ಒದಗಿಸಲು ಕ್ರಮವಹಿಸುವಂತೆ ಸಂಸದ ಪ್ರಜ್ವಲ್ ರೇವಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿಗಳ ಕುರಿತು ಸಭೆ ನಡೆಸಿ ಮಾತನಾಡಿದ ಅವರು,ಅರಸೀಕೆರೆ ತಾಲೂಕಿನ ಬೆಂಡೆಕೆರೆ ರೈತರ ಜಮೀನನ್ನು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸ್ವಾಧಿನ ಪಡಿಸಿಕೊಳ್ಳಲಾಗಿದೆ ಆದರೆ ಸೂಕ್ತ ಪರಿಹಾರ ನೀಡಿಲ್ಲ ಸಂಕಷ್ಟದಲ್ಲಿರುವ ರೈತರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾನೂನುಬದ್ದವಾಗಿ ನಿರ್ಧಾರ ತೆಗೆದುಕೊಂಡು ಪರಿಹಾರ ನೀಡುವುದು ಅಗತ್ಯವಿದೆ ಎಂದು ತಿಳಿಸಿದರು.
ಕಾಫಿ ಬೆಳೆಗಾರರು ತಮ್ಮ ಜಮೀನುಗಳನ್ನು ಆಧಾರವಾಗಿಟ್ಟು ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಂಡಿದ್ದು, ಸುಸ್ಥಿದಾರರಾದ ರೈತರ ಜಮೀನುಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಹರಾಜು ಮಾಡುತ್ತಿದ್ದಾರೆ ಅಧಿಕಾರಿಗಳು ಎಚ್ಚರವಹಿಸಬೇಕಿದೆ ಎಂದು ತಿಳಿಸಿದರು.
ಶಾಸಕ ಎಚ್.ಡಿ.ರೇವಣ್ಣ ಅವರು ಮಾತನಾಡಿ, ರೈತರು ಒಂದು ಬಾರಿ ಜಮೀನು ಕಳೆದುಕೊಂಡರೆ ಅವರಿಗೆ ಯಾವುದೇ ಆಧಾರವಿಲ್ಲದಂತೆ ಆಗುತ್ತದೆ ಈ ಹಿನ್ನಲೆಯಲ್ಲಿ ಅಧಿಕಾರಿಗಳು ವಸ್ತುಸ್ಥಿತಿಯನ್ನು ಅವಲೋಕಿಸಿ ಸೂಕ್ತ ಪರಿಹಾರ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಮಾತನಾಡಿ ಪರಿಶೀಲಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.