ಜಿಲ್ಲೆ

ರೈತರಿಗೆ ಅಗತ್ಯವಾದಷ್ಟು ದಾಸ್ತಾನಿಗೆ ಕ್ರಮ ವಹಿಸಲಿ

ಹಗರಿಬೊಮ್ಮನಹಳ್ಳಿ: ಬಿತ್ತನೆಗೂ ಮುನ್ನ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ರೈತರಿಗೆ ಅಗತ್ಯವಿದ್ದಷ್ಟು ಸಂಗ್ರಹವಾಗಿರಬೇಕು. ಈ ಕುರಿತು ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.

ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ 51 ಫಲಾನುಭವಿಗಳಿಗೆ ಸಾಮಗ್ರಿಗಳನ್ನು ವಿತರಣೆ ಮಾಡಿ ಶನಿವಾರ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಅಂಬೇಡ್ಕರ್ ನಿಗಮ, ಬಂಜಾರ, ಭೋವಿ ನಿಗಮದಿಂದ ಗಂಗಾಕಲ್ಯಾಣ ಯೋಜನೆಯಡಿ 150 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಾಮಗ್ರಿಗಳನ್ನು ಕೊಡುವುದಿದೆ ಎಂದರು.

ಈ ವರ್ಷ ಉತ್ತಮ ಮಳೆಯಾಗುವ ಲಕ್ಷಣಗಳಿವೆ. ನೀರು ಸಂಗ್ರಹವಾಗುವ ಮುನ್ನ ಮಾಲವಿ ಜಲಾಶಯದ ಕ್ರಸ್ಟ್‌ಗೇಟ್‌ಗಳ ದುರಸ್ತಿ ಮಾಡಲಾಗುವುದು. ಜಲಾಶಯದ ಕಾಲುವೆಗಳ ಜಂಗಲ್ ಕಟಿಂಗ್, ಇಂಟೇಕ್ ಕಾಲುವೆಗಳು, ಗೇಟ್‌ಗಳ ದುರಸ್ತಿ ಮತ್ತು ಹೂಳು ತೆಗೆಯಲು ನೀರಾವರಿ ಇಲಾಖೆಯಿಂದ ಎರಡು ಕೋಟಿ ರೂ. ಮಂಜೂರು ಆಗಿದೆ. ಕ್ಷೇತ್ರದ ಎಲ್ಲ ಏತ ನೀರಾವರಿ ಯೋಜನೆಗಳ ದುರಸ್ತಿ ಕಾರ್ಯ ನಡೆಯಬೇಕು. ತುಂಗಾಭದ್ರಾ ನದಿ ಹಿನ್ನೀರು ಬರುವವರೆಗೆ ಈ ಕೆಲಸಗಳಿಗಾಗಿ ಕಾಯುವುದು ಬೇಡ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಚಿಲವಾರಬಂಡಿ ಏತ ನೀರಾವರಿ ಯೋಜನೆ ಸಂಪೂರ್ಣ ಮುಗಿದಿದ್ದು, ತುಂಗಾಭದ್ರಾ ಜಲಾಶಯದಲ್ಲಿ ಹಿನ್ನೀರು ಬಂದ ತಕ್ಷಣ ರೈತರಿಗೆ ನೀರು ಪೂರೈಸಲಾಗುವುದು ಎಂದು ತಿಳಿಸಿದರು.

ಪ್ರಮುಖರಾದ ಚಿತ್ತವಾಡ್ಗಿ ಪ್ರಕಾಶ, ಐನಳ್ಳಿ ಸೋಮಶೇಖರ, ವಟಮ್ಮನಹಳ್ಳಿ ಉದಯ, ಮಹಂತೇಶನಾಯ್ಕ, ಶ್ರೀಶೈಲ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಸಿದ್ದರಾಜು ಇತರರಿದ್ದರು.