ಜಿಲ್ಲೆ

ರೈತರಿಗಾಗಿ ಯಾವುದೇ ಯೋಜನೆ ರೂಪಿಸಿಲ್ಲ

ಗುಂಡ್ಲುಪೇಟೆ: ರೈತರ ಆತ್ಮಹತ್ಯೆ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿದ್ದು, ಪ್ರತಿ ಅರ್ಧಗಂಟೆಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾಮೂಹಿಕ ನಾಯಕತ್ವದ ರೈತ ಸಂಘದ ರಾಜ್ಯ ಸಮಿತಿಯ ಸದಸ್ಯ ಹೊನ್ನೂರು ಪ್ರಕಾಶ್ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ರೈತಸಂಘದ ಗ್ರಾಮಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಗಲಿರುಳು ಕಷ್ಟಪಟ್ಟು ಬೆಳೆ ಬೆಳೆಯುತ್ತಿದ್ದರೂ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ಸಾಲದ ಕೂಪದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಮಹಾರಾಷ್ಟ್ರ ದೇಶದಲ್ಲಿಯೇ ಮೊದಲನೇ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಅನುಕೂಲಕ್ಕೆ ಯಾವುದೇ ಯೋಜನೆಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯವು ಮೊದಲ ಸ್ಥಾನಕ್ಕೆ ಬಂದರೂ ಅಚ್ಚರಿಯಿಲ್ಲ ಎಂದರು.

ಕಾಡಂಚಿನ ಗ್ರಾಮಗಳಿಗೆ ಸೀಮಿತವಾಗಿದ್ದ ವನ್ಯಜೀವಿಗಳ ಹಾವಳಿ ಈಗ ಎಲ್ಲ ಕಡೆಗಳಲ್ಲಿಯೂ ವ್ಯಾಪಿಸಿದೆ. ರೈತರು ಸಾಲಸೋಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಗಳು ವನ್ಯಜೀವಿಗಳ ಪಾಲಾಗುತ್ತಿದ್ದು ಅರಣ್ಯ ಇಲಾಖೆಯಿಂದ ಪುಡಿಗಾಸಿನ ಪರಿಹಾರಕ್ಕೆ ಅಲೆದಾಡುವಂತಾಗಿದೆ. ಹುಲಿ ಚಿರತೆಗಳ ಕಾಟದಿಂದ ರೈತರು ಬೆಳೆದ ಬೆಳೆಗಳ ರಕ್ಷಣೆ ಸಾಧ್ಯವಾಗುತ್ತಿಲ್ಲ. ಕೆಲಸ ಮಾಡಲು ಕಾರ್ಮಿಕರು ಬರುತ್ತಿಲ್ಲ. ಸಾಕುಪ್ರಾಣಿಗಳು ಹುಲಿ ಚಿರತೆಗಳ ಪಾಲಾಗುತ್ತಿವೆ. ಅವುಗಳನ್ನು ಸೆರೆಹಿಡಿಯುವ ಬದಲು ರೈತರ ಮೇಲೆ ಕೇಸ್ ಹಾಕಲಾಗುತ್ತಿದೆ. ಆದ್ದರಿಂದ ತಮಗೆ ದೊರಕಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಹಾಗೂ ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ರೈತರು ಸಂಘಟಿತರಾಗುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಪಾಪಣ್ಣ, ಉಪಾಧ್ಯಕ್ಷ ಮಹೇಶ್, ಮಾರಶೆಟ್ಟಿ, ಮಹದೇವಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ.ಹುಂಡಿ ಪ್ರಸಾದ್, ನಾಗೇಂದ್ರ ಹಾಗೂ ಇತರರು ಇದ್ದರು.