ಚಿತ್ರದುರ್ಗ: ಬೆಳೆ ಹಾನಿ ಪರಿಶೀಲನೆ, ನಷ್ಟ ಅಂದಾಜಿಸಿ, ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಶಾಶ್ವತ ಕೋಶವೊಂದನ್ನು ತುರ್ತಾಗಿ ರಚಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ರೈತ ಸಮುದಾಯಕ್ಕೆ ಅನುಕೂಲವಾಗಲಿರುವ ಕೋಶ ರಚನೆಗೆ ಮುಂದಾಗಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಚಿತ್ರದುರ್ಗ ಜಿಲ್ಲೆ ಶಾಶ್ವತ ಬರ ಪೀಡಿತ ಪ್ರದೇಶ. ಒಮ್ಮೆ ಅತಿವೃಷ್ಟಿ, ಮತ್ತೊಮ್ಮೆ ಅನಾವೃಷ್ಟಿ ಇಲ್ಲಿ ಸಾಮಾನ್ಯವಾಗಿದೆ. ಹವಾಮಾನ ವೈಪರಿತ್ಯಗಳು ರೈತರ ಬದುಕಿನ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿವೆ. ಹೀಗಾಗಿ ಪ್ರತಿ ವರ್ಷ ನಷ್ಟ ಅನುಭವಿಸುತ್ತಿದ್ದಾರೆ. ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಶ್ವತ ವೇದಿಕೆ ಒದಗಿಸುವ ಅನಿವಾರ್ಯತೆ ಇದೆ ಎಂದು ಆಗ್ರಹಿಸಿದರು.
ಕಂದಾಯ, ಕೃಷಿ, ತೋಟಗಾರಿಕೆ, ವಿಮಾ ಕಂಪನಿ ಅಧಿಕಾರಿಗಳಿರುವ ಕೋಶ ರಚಿಸಬೇಕು. ಇದಕ್ಕಾಗಿ ಪ್ರತ್ಯೇಕ ಕಚೇರಿ ತೆರೆದು ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಯಾವುದೇ ರೀತಿಯಲ್ಲಿ ರೈತರಿಗೆ ತೊಂದರೆಯಾದರೂ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ನೆಟ್‌ವರ್ಕ್ ಮೂಲಕ ಬೆಳೆ ನಷ್ಟ ತ್ವರಿತವಾಗಿ ಅಂದಾಜಿಸಬೇಕು. ಅಲ್ಲದೆ, ಸಹಾಯವಾಣಿ ತೆರೆಯಬೇಕು. ದೂರುಗಳನ್ನು ಆಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿ, ಪರಿಹಾರ ವಿತರಣೆಗೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹಿಂದಿನ ವರ್ಷ ಮಳೆ ಹೆಚ್ಚಾಗಿ ಈರುಳ್ಳಿ ಬೆಳೆ ಕೊಳೆತು ಹೋಗಿದೆ. ಅಲ್ಲದೆ, ಕಳಪೆ ಬೀಜ ವಿತರಣೆಯಿಂದಾಗಿ ಸಾವಿರಾರು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದರೂ ಹೂ ಬಿಟ್ಟಿದೆಯೇ ಹೊರತು ಕಾಯಿ ಕಟ್ಟಿಲ್ಲ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ತಾಂತ್ರಿಕ ಲೋಪ, ತಪ್ಪು ನಿರ್ಧಾರದಿಂದಾಗಿ ಬಹಳಷ್ಟು ರೈತರಿಗೆ ಪರಿಹಾರ ದೊರೆತಿಲ್ಲ ಎಂದು ಅಳಲು ತೋಡಿಕೊಂಡರು.
ಜಿಲ್ಲಾಡಳಿತ ತಕ್ಷಣ ಬೆಳೆ ನಷ್ಟದ ಕುರಿತು ಮತ್ತೊಮ್ಮೆ ಪರಿಶೀಲಿಸಿ, ಪರಿಹಾರ ವಿತರಿಸಬೇಕು. ಬೆಸ್ಕಾಂ ನಿತ್ಯ ಏಳು ತಾಸು ವಿದ್ಯುತ್ ಪೂರೈಸಬೇಕು. ಯಾವ ಕಾರಣಕ್ಕೂ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಬಾರದು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಕೋರಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಹೊರಕೇರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮುಖಂಡರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಶಿವಕುಮಾರ್, ಚೇತನ ಯಳನಾಡು, ಲಕ್ಷ್ಮೀಕಾಂತ, ಭೂತಯ್ಯ ಇತರರಿದ್ದರು.