ಜಿಲ್ಲೆ

ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಹೆಚ್ಚಿನ ಪರಿಹಾರ ಆಗ್ರಹ

Hassan - Ramesh H R

ಹಾಸನ: ಹೇಮಾವತಿ ಜಲಾನಯನ ಪ್ರದೇಶ ವ್ಯಾಪ್ತಿಯ ದುದ್ದ ಮತ್ತು ಶಾಂತಿಗ್ರಾಮ ಹೋಬಳಿ ಭಾಗದ ಕೆರೆಗಳಿಗೆ ನೀರು ತುಂಬಿಸಲು ಪೈಪ್‌ಲೈನ್ ಕಾಮಗಾರಿಗಾಗಿ ರೈತರಿಂದ ಭೂಮಿ ಭೂಸ್ವಾಧೀನ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ, ಏಕಪಕ್ಷಿಯವಾಗಿ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಲಾಗಿದೆ ಭಾಗದ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪೈಪ್‌ಲೈನ್ ಕಾಮಗಾರಿಗಾಗಿ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ದುದ್ದ ಮತ್ತು ಶಾಂತಿಗ್ರಾಮ ಹೋಬಳಿ ಭಾಗದ ಕೆರೆಗಳಿಗೆ ನೀರು ತುಂಬಿಸಲು ಪೈಪ್‌ಲೈನ್ ಕಾಮಗಾರಿಗಾಗಿ ರೈತರಿಂದ ಭೂಮಿ ಸ್ವಾಧೀನ ಪಡಿಸಿಕೊಂಡು ಒಂದು ಗುಂಟೆಗೆ 1 ಲಕ್ಷರೂ. ಪರಿಹಾರ ಎಂದು ಜಿಲ್ಲಾಧಿಕಾರಿ ನಿಗಧಿ ಪಡಿಸಿದ್ದಾರೆ. ಆದರೆ, ಪೈಪ್‌ಲೈನ್ ಅಷ್ಟೇ ಅಲ್ಲದೇ ರಸ್ತೆಗೂ ನಮ್ಮ ಭೂಮಿಯನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಭೂಸ್ವಾಧೀನ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ, ಏಕಪಕ್ಷಿಯವಾಗಿ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಲಾಗಿದೆ. ನಮ್ಮ ಉಳಿಕೆ ಭೂಮಿಗೆ ಹೋಗಲು ಸರ್ವೀಸ್ ರಸ್ತೆ, ಅಂಡರ್ ಪಾಸ್, ಮೇಲ್ಸೇತುವೆ ನಿರ್ಮಾಣದ ಬಗ್ಗೆ ಸ್ಥಳ ಪರಿಶೀಲನೆ, ರೈತರೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಪರಿಸರ ಅಧ್ಯಯನ ಹಾಗು ಸಾಮಾಜಿಕ ಪರಿಣಾಮಗಳ ಬಗ್ಗೆ ಯಾವುದೇ ಚರ್ಚೆಯನ್ನು ನಡೆಸಿಲ್ಲ ಎಂದು ದೂರಿದರು.
ಪೈಪ್‌ಲೈನ್ ಹಾದು ಹೋಗಿರುವ ಗ್ರಾಮಗಳಲ್ಲಿನ ಶಾಲೆ, ಅಂಗನವಾಡಿ, ಪಶು ಆಸ್ಪತ್ರೆ ಒಳಚರಂಡಿ ಸೇರಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಇಲ್ಲಿಯವರೆಗೂ ಯಾವುದೇ ಗ್ರಾಮವನ್ನು ಆಯ್ಕೆ ಮಾಡಿಲ್ಲ ಎಂದು ದೂರಿದರು.
2ನೇ ಅಧಿಸೂಚನೆ ಹೊರಡಿಸಿ ವ್ಯತ್ಯಾಸವಾದ ಭೂಮಿಯನ್ನು ಸಾಧೀನಕ್ಕೆ ಪಡೆಯುವ ನಿಟ್ಟಿನಲ್ಲಿ ಯಾವುದೇ ನೋಟೀಸ್ ನೀಡದೇ ಮೊದನೇ ಅಧಿಸೂಚನೆ ಅನ್ವಯ ಪರಿಹಾರ ಧನ ನಿಗಧಿ ಮಾಡಲಾಗಿದೆ. ತೆಂಗಿನ ಮರಗಳಿಗೆ ಸರಿಯಾದ ದರ ನೀಡಿಲ್ಲ. ಕಟ್ಟಡಗಳು, ಕೊಟ್ಟಿಗೆ, ಮರಗಳಿಗೆ ಸೂಕ್ತ ಬೆಲೆ ನಿಗಧಿಪಡಿಸಬೇಕೆಂದು ಒತ್ತಾಯಿಸಿ ಮನವಿಯನ್ನು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಸಲ್ಲಿಸಿರು.
ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣ್, ಗ್ರಾಮದ ಮಾಯಾಸಂದ್ರದ ಚಂದ್ರೇಗೌಡ, ದುದ್ದ ಗ್ರಾಮದ ಶಂಕರ್, ಮಹಾಲಿಂಗೇಗೌಡ, ಡಿ.ಎನ್. ಸುರೇಶ್, ಬೀರೇಗೌಡ, ಕುಮಾರ್, ಪರಮೇಶ್, ವೆಂಕಟೇಶ್, ಜಯರಾಂ, ಕರೀಗೌಡ, ಗುರುಸ್ವಾಮಿ, ಈರೇಗೌಡ ಇತರರು ಇದ್ದರು.