ಜಿಲ್ಲೆ

ರೈತರಿಂದ ವಿಧಾನಸೌಧ ಚಲೋ 21ಕ್ಕೆ

ಹುಬ್ಬಳ್ಳಿ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆಪ್ಟೆಂಬರ್ 21ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲು ರೈತರು ನಿರ್ಧರಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದ ವ್ಯಾಪಾರಸ್ಥರ ಸಂಘದಲ್ಲಿ ಮಂಗಳವಾರ ಏರ್ಪಡಿಸಿದ್ದ ರೈತ ಚೇತನ ಪಕ್ಕೀರಗೌಡ ಪೂವಣ್ಣವರ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ರೈತ ನಾಯಕರು ಈ ನಿರ್ಣಯ ಕೈಗೊಂಡಿದ್ದಾರೆ.

ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಎಂಬುದು ರೈತರ ಪಾಲಿನ ಮರಣ ಶಾಸನವಾಗಿದೆ. ಅಲ್ಲದೆ, ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುತ್​ಶಕ್ತಿ ಹೊಸ ಕಾಯ್ದೆಗಳು ಕೃಷಿಕರಿಗೆ, ವ್ಯಾಪಾರಸ್ಥರಿಗೆ ಮಾರಕವಾಗಿದೆ. ಇವುಗಳನ್ನು ಕೂಡಲೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ರೈತರಿಗೆ ಕಳೆದ ವರ್ಷದ ಬೆಳೆವಿಮೆ ಪರಿಹಾರ ಶೀಘ್ರ ನೀಡಬೇಕು, ಬಗರ್​ಹುಕುಂ ಹಾಗೂ ಹೂ ಬೆಳೆಗಾರರ ಸಮಸ್ಯೆ ಪರಿಹಾರ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರು ಚಲೋ ನಡೆಸಲಾಗುವುದು ಎಂದರು.

ಸಂಘದ ಜಿಲ್ಲಾಧ್ಯಕ್ಷ ಕಲ್ಮೇಶ ಲಿಗಾಡಿ, ಉಪಾಧ್ಯಕ್ಷ ಮಂಜುನಾಥ ಕಾಲವಾಡ, ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ, ಮಾಜಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡ್ರ, ಉತ್ತರ ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ, ಭಕ್ತರಳ್ಳಿ ಭೈರೇಗೌಡ, ಮಹಾಂತೇಶ ಪೂಜಾರ, ಗಣೇಶ ಈಳಿಗೇರ, ಸತ್ಯಪ್ಪ ಮಲ್ಲಾಪುರ, ಮಂಜುನಾಥ ಉಪ್ಪಾರ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ, ಇತರು ಸಭೆಯಲ್ಲಿದ್ದರು.

ಬೆಳಗಾವಿ, ಧಾರವಾಡ, ಹಾವೇರಿ, ಗದಗ ಮುಂತಾದ ಜಿಲ್ಲೆಗಳ 400ಕ್ಕೂ ಹೆಚ್ಚು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.