ಜಿಲ್ಲೆ

ರೈತರಿಂದ ಬೆಳೆ ಸಮೀಕ್ಷೆ ಆ್ಯಪ್‌ಗೆ ಮಾಹಿತಿ ಅಪ್ಲೋಡ್ ಮಾಡಿಸಿ

ಹಾಸನ: ಸೆ.24ರ ಒಳಗೆ ರೈತರ ಮೂಲಕ ಬೆಳೆ ಸಮೀಕ್ಷೆ ಆ್ಯಪ್‌ಗೆ ಅಗತ್ಯ ಮಾಹಿತಿ ಅಪ್ಲೋಡ್ ಮಾಡಿಸಿ ನಿರ್ದಿಷ್ಟ ಗುರಿ ತಲುಪಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ 2020-21ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ಏರ್ಪಡಿಸಿದ್ದ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ 15.16 ಲಕ್ಷ ಭೂಮಿ ತಾಕುಗಳಿದ್ದು, ಇದುವರೆಗೆ 71 ಸಾವಿರ ತಾಕುಗಳ ಅಪ್ಲೋಡ್ ಮಾಡಲಾಗಿದೆ. ಎಲ್ಲ ತಾಲೂಕುಗಳಲ್ಲಿನ ರೈತ ಸಂಪರ್ಕ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಕರಪತ್ರ ಹಂಚುವ ಮೂಲಕ ಅರಿವು ಮೂಡಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ರೈತರ ಸಭೆ ನಡೆಸಿ ಪಿಆರ್‌ಗಳ ಮೂಲಕ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಹೇಗೆ ಅಪ್ಲೋಡ್ ಮಾಡಬೇಕು ಮತ್ತು ಹೇಗೆ ಬಳಸಬೇಕು ಎಂಬುದರ ಕುರಿತು ಪೂರ್ಣ ಮಾಹಿತಿ ನೀಡುವಂತೆ ಕ್ರಮ ವಹಿಸಿ ಎಂದು ತಹಸೀಲ್ದಾರ್‌ರಿಗೆ ತಿಳಿಸಿದರು.

ಬೆಳೆ ಸಮೀಕ್ಷೆ ಮಾಡಲು ನೆಟ್‌ವರ್ಕ್ ಸಮಸ್ಯೆ ಇರುವ ಸ್ಥಳಗಳಲ್ಲಿನ ರೈತರನ್ನು ನೆಟ್‌ವರ್ಕ್ ಸಿಗುವಂತಹ ಸ್ಥಳಗಳ ರೈತರೊಂದಿಗೆ ಕರೆದು ಆ್ಯಪ್ ಬಳಸುವ ಕುರಿತು ಪ್ರಾತ್ಯಕ್ಷಿಕೆ ನೀಡುವ ಮೂಲಕ ಎಲ್ಲ ರೈತರಿಗೂ ತಿಳಿಯುವಂತೆ ಕ್ರಮ ಕೈಗೊಳ್ಳಬೇಕು. ತಹಸೀಲ್ದಾರ್ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಜತೆಗೂಡಿ ಸಭೆ ನಡೆಸಿ ಬೆಳೆ ಸಮೀಕ್ಷೆ ಆ್ಯಪ್ ಬಳಸುವ ಕುರಿತು ಮಾಹಿತಿ ನೀಡಿ ಹಾಗೂ ಆ.29ರೊಳಗೆ ಬೆಳೆ ಸಮೀಕ್ಷೆಯಲ್ಲಿ ಶೇ.20 ರಷ್ಟು ಪ್ರಗತಿ ಸಾಧಿಸಬೇಕು ಎಂದರು.

ಜಿಲ್ಲೆಯಲ್ಲಿ ಮಳೆಯಿಂದ 4,600 ಹೆಕ್ಟೇರ್‌ನಲ್ಲಿ ಬೆಳೆಹಾನಿ ಹಾಗೂ ಕಾಫಿ ಸೇರಿದಂತೆ 7 ಸಾವಿರ ಹೆಕ್ಟೇರ್ ನಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಕಾಫಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆಯವರು ತಂಡವಾಗಿ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಫಲಾನುಭವಿಯೊಂದಿಗೆ ಹಾನಿಯಾಗಿರುವ ಪ್ರದೇಶದ ಭಾವಚಿತ್ರ ತೆಗೆದು ಸಂಪೂರ್ಣ ಮಾಹಿತಿ ಅಪ್ಲೋಡ್ ಮಾಡಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಡಾ. ನವೀನ್ ಭಟ್, ಜಂಟಿ ಕೃಷಿ ನಿರ್ದೇಶಕ ರವಿಕುಮಾರ್, ತಹಸೀಲ್ದಾರ್ ಶಿವಶಂಕರಪ್ಪ, ಸಂತೋಷ್ ಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೇಶ್ ಇತರರಿದ್ದರು.