ಜಿಲ್ಲೆ

ರೈತರಿಂದ ಕೃಷಿ ಇಲಾಖೆ ಮುತ್ತಿಗೆ

Dharwad

ನವಲಗುಂದ: ಬೆಂಬಲ ಬೆಲೆ ಯೋಜನೆಯಡಿ ಕಡಲೆ ಮಾರಾಟ ಮಾಡಲು ರೈತರಿಗೆ ಪಹಣಿ ಪತ್ರಿಕೆಯಲ್ಲಿ ಬೆಳೆ ದರ್ಶಕದಲ್ಲಿ ತಾಂತ್ರಿಕ ತೊಂದರೆಗೆ ಸಿಲುಕಿದ ರೈತರು ತಮಗಾದ ಅನ್ಯಾಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಬುಧವಾರ ಸ್ಥಳೀಯ ಕೃಷಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಸವರಾಜ ಒಲೇಕಾರ ಮಾತನಾಡಿ, ಈ ಬಾರಿ ಹಿಂಗಾರು ಹಂಗಾಮಿನಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೆಳೆದಿದ್ದಾರೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಸೂಕ್ತ ಬೆಲೆ ಇಲ್ಲದೇ ನಷ್ಟ ಅನುಭವಿಸುತ್ತಿದ್ದಾರೆ. ಅದಕ್ಕಾಗಿ ರೈತರು ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೆ, ತಲಾಟಿಯವರು ಅಳವಡಿಸಿದ ಬೆಳೆ ದರ್ಶಕದಲ್ಲಿ ಜಿಪಿಎಸ್ ಕೃಷಿ ಇಲಾಖೆಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಕೃಷಿ ಇಲಾಖೆಯಲ್ಲಿ ಡಿಪಿಆರ್ ಸಂಖ್ಯೆ ನೀಡಿದ ರೈತರ ದಾಖಲೆಗಳು ಎಪಿಎಂಸಿ ಕಚೇರಿಯಲ್ಲಿ ಲಾಗಿನ್ ಆಗುತ್ತಿಲ್ಲ. ಇದರಿಂದ ರೈತರು ಕಡಲೆ ಮಾರಾಟ ಮಾಡಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ತಲಾಟಿಯವರು ರೈತರಿಗೆ ಸ್ಪಂದಿಸುತ್ತಿಲ್ಲ. ತಾಂತ್ರಿಕ ಸಮಸ್ಯೆ ಸರಿಪಡಿಸದೆ ರೈತರನ್ನು ಸತಾಯಿಸುತ್ತಿದ್ದಾರೆ ಎಂದು ದೂರಿದರು. ಕೃಷಿ ಇಲಾಖೆಗೆ ಮುತ್ತಿಗೆ ಹಾಕಿದ ರೈತರ ಬಳಿಗೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು. ಗುರುವಾರ ಬೆಳಗ್ಗೆ ರೈತರ ಸಮ್ಮುಖಲ್ಲಿ ತಹಸೀಲ್ದಾರರೊಂದಿಗೆ ಸಭೆ ಕರೆದು ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಿಳಿಸಿದರು.

ಆಗ ರೈತರು ಪ್ರತಿಭಟನೆ ಕೈಬಿಟ್ಟರು. ಬಸವರಾಜ ಲಕ್ಕಣ್ಣವರ, ಅಶೋಕ ಮಂಕಣಿ, ಬಸವರಾಜ ಕುಂದಗೋಳ, ಈರಪ್ಪ ಗೊಣ್ಣಾಗರ, ರಮೇಶ ಮಡಿವಾಳರ, ಶ್ರೀನಿವಾಸ ನವಲಗುಂದ, ಶಿವಯ್ಯ ಹಿರೇಮಠ, ವಿರೂಪಾಕ್ಷ ತುಳಸಿಗೇರಿ, ನಾಗನಗೌಡ ಖನ್ನೂರ ಇದ್ದರು.

ಮೆಕ್ಕಜೋಳ ಖರೀದಿ ಕೇಂದ್ರ ಆರಂಭಿಸಿ: ಕಡಲೆ ಖರೀದಿ ಕೇಂದ್ರದಲ್ಲಿ ರೈತರಿಗೆ ಎದುರಾದ ಸಮಸ್ಯೆ, ಬೆಂಬಲ ಬೆಲೆ ಯೋಜನೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಅವರು ಬುಧವಾರ ಧಾರವಾಡ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಬಾರಿ ಮೆಕ್ಕೆಜೋಳ ದರ ಮಾರುಕಟ್ಟೆಯಲ್ಲಿ 1000 ರೂ. ದಿಂದ 1100 ರೂ. ಇದ್ದ ಕಾರಣಕ್ಕೆ ರೈತರಿಗೆ ಹಾನಿಯಾಗಿದೆ. ಅತಿವೃಷ್ಟಿ ಯಿಂದ ಕೆಂಗೆಟ್ಟ ರೈತನ ನೆರವಿಗೆ ಸರ್ಕಾರ ಬರಬೇಕಿದೆ. ಕೇಂದ್ರ ಸರ್ಕಾರ ಈಗಾಗಲೇ ಎಂಎಸ್​ಪಿ ದರ 1760 ರೂ. ಘೊಷಣೆ ಮಾಡಿದ್ದು, ರಾಜ್ಯ ಸರ್ಕಾರ ತಕ್ಷಣ ಬೆಂಬಲ ಬೆಲೆ ಯೋಜನೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾದ್ಯಂತ ರೈತರು ಸಾಕಷ್ಟು ಪ್ರಮಾಣದಲ್ಲಿ ಕಡಲೆ ಬೆಳೆದಿದ್ದು, ಸರ್ಕಾರ ಎಫ್​ಎಕ್ಯೂ ಗುಣ ಮಟ್ಟದ ಕಡಲೆಕಾಳಿಗೆ ಕ್ವಿಂಟಾಲ್​ಗೆ 4,875 ರೂ. ದರ ನಿಗದಿಪಡಿಸಿ ಖರೀದಿ ಕೇಂದ್ರ ಪ್ರಾರಂಭಿಸಿದೆ. ಆದರೆ, ರೈತರು ನೋಂದಣಿ ಮಾಡಲು ದಾಖಲೆಗಳನ್ನು ಸಲ್ಲಿಸಿದರೂ ಕೆಲ ಸಮಸ್ಯೆಗಳು ಎದುರಾಗಿವೆ. ಆ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಬೇಕು. ಕಡಲೆ ಖರೀದಿ ಕೇಂದ್ರದಲ್ಲಿ ಸರ್ಕಾರ ಪ್ರತಿ ಖಾತೆಗೆ 10 ಕ್ವಿಂಟಾಲ್ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಿದೆ. ಅಪಾರ ಪ್ರಮಾಣದಲ್ಲಿ ಕಡಲೆ

ಬೆಳೆದ ರೈತರು ಮಾರುಕಟ್ಟೆಯಲ್ಲೂ ಸೂಕ್ತ ಬೆಲೆ ಸಿಗದೆ ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸರ್ಕಾರ 10 ಕ್ವಿಂಟಾಲ್ ಮಿತಿ ರದ್ದು ಮಾಡಿ ಎಲ್ಲ ಬೆಳೆಯನ್ನು ಖರೀದಿಸಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ಮುಖಂಡರಾದ ಗುರುರಾಜ ಹುಣಸಿಮರದ, ರಾಜು ಅಂಬೋರೆ, ದೇವರಾಜ ಕಂಬಳಿ, ಮಲ್ಲಪ್ಪ ಕುರಹಟ್ಟಿ, ಸಿದ್ದು ತೇಜಿ, ಗಂಗಪ್ಪ ಈರೇಶನವರ, ಭೀಮಪ್ಪ ಕಾಸಾಯಿ, ಶಾಂತವೀರ ಬೆಟಗೇರಿ, ವೆಂಕಟೇಶ ಸಗಬಾಳ, ನಾಗಯ್ಯ ಹಿರೇಮಠ, ಮುದಕಪ್ಪ ಮೊದುನವರ, ರಾಜು ಹಳ್ಯಾಳ, ರಾಮು ತಾವರೆ, ಎಪಿಎಂಸಿ ಸದಸ್ಯರು ಇದ್ದರು.