ಜಿಲ್ಲೆ

ರೈತರಿಂದ ಕಡಲೆ ಬೆಳೆ ಖರೀದಿ 16ರಿಂದ

ಉಪ್ಪಿನಬೆಟಗೇರಿ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಕಡಲೆ ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರು ಹೆಸರು ನೋಂದಣಿ ಮಾಡಿಸಿ ಯೋಜನೆ ಸದುಪಯೋಗ ಪಡೆಯಬೇಕು ಎಂದು ಧಾರವಾಡ ಎಪಿಎಂಸಿ ಅಧ್ಯಕ್ಷ ಮಹಾವೀರ ಜೈನರ ಹೇಳಿದರು.

ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಕಡಲೆ ಖರೀದಿ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಡಲೆ ಖರೀದಿಸಬೇಕೆಂದರೆ ಗ್ರಾಮದ ಖರೀದಿ ಕೇಂದ್ರದಲ್ಲಿ ರೈತರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್​ಬುಕ್, ಹೊಲದ ಪಹಣಿ ಪತ್ರ ನೀಡಿ ನೋಂದಾಯಿಸಬೇಕು. ಮಾ. 16ರಿಂದ ಕಡಲೆ ಖರೀದಿ ಆರಂಭಿಸಲಾಗುವುದು ಎಂದರು.

ಪಿಕೆಪಿಎಸ್ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ ಮಾತನಾಡಿ, ರೈತರಿಂದ ಪ್ರತಿ ಎಕರೆಗೆ 3 ಕ್ವಿಂಟಾಲ್​ನಂತೆ ಗರಿಷ್ಠ 10 ಕ್ವಿಂಟಾಲ್ ಕಡಲೆ ಖರೀದಿಗೆ ಅವಕಾಶವಿದೆ. ಈಗಾಗಲೇ 800 ರೈತರು ನೋಂದಣಿ ಮಾಡಿಸಿದ್ದಾರೆ. ಪ್ರತಿ ಕ್ವಿಂಟಾಲ್​ಗೆ 4875 ರೂ. ದರ ನಿಗದಿಪಡಿಸಲಾಗಿದೆ. ಕಡಲೆಯನ್ನು ಆನ್​ಲೈನ್ ಮೂಲಕ ಖರೀದಿ ಮಾಡುತ್ತಿರುವುದರಿಂದ ಧಾರವಾಡ ಜಿಲ್ಲೆಯ ಬೇರೆ ತಾಲೂಕಿನ ಕಡಲೆ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ್ದರೆ ಅಂಥವರಿಗೆ ಇಲ್ಲಿ ಅವಕಾಶವಿಲ್ಲ ಎಂದರು.

ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಪುಡಕಲಕಟ್ಟಿ, ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ, ಬಸವರಾಜ ಹೊಸೂರ, ಜಿ.ಆರ್. ಜವಳಗಿ, ವೀರಣ್ಣ ಪರಾಂಡೆ, ಈರಣ್ಣ ಮಡಿವಾಳರ, ಧರೆಪ್ಪ ಬೊಬ್ಬಿ, ದಾದಾಭಾಯಿ ಮನ್ನಾನಾಯ್ಕ, ಎಂ.ಕೆ. ಕಳ್ಳಿಮನಿ, ಅಜೀತ ಛಬ್ಬಿ, ಬಸವರಾಜ ಕಣಕಿ, ಇತರರಿದ್ದರು. ಕಲ್ಲಪ್ಪ ಕಿತ್ತೂರ ನಿರ್ವಹಿಸಿದರು.

2181 ಅರ್ಜಿ ಸ್ವೀಕಾರ: ಕುಂದಗೋಳ ತಾಲೂಕಿನಲ್ಲಿ ಯರಗá-ಪ್ಪಿ, ಯಲಿವಾಳ, ಕುಂದಗೋಳದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿ ಕೇಂದ್ರ ತೆರೆಯಲಾಗಿದೆ. ಇಲ್ಲಿವರೆಗೆ 3 ಕೇಂದ್ರಗಳು ಸೇರಿ ಒಟ್ಟು 2181 ಅರ್ಜಿಗಳು ಸ್ವೀಕಾರವಾಗಿವೆ. ಅರ್ಜಿ ಸಲ್ಲಿಕೆಗೆ ಮಾ. 15 ಕೊನೇ ದಿನ. ಮಾ. 16ರಿಂದ ಕಡಲೆ ಖರೀದಿ ಆರಂಭವಾಗಲಿದೆ.