ಗಂಗಾಧರ್ ಬೈರಾಪಟ್ಟಣ ರಾಮನಗರ
ಎಪಿಎಂಸಿಯಲ್ಲಿ ರೈತರನ್ನು ವಂಚಿಸುವುದು ಸಾಮಾನ್ಯ ಎನ್ನುವಂತೆ ಆಗಿದೆ. ಆದರೆ ಸರ್ಕಾರವನ್ನೂ ವಂಚಿಸುವ ಕೆಲಸ ಸದ್ದಿಲ್ಲದೆ ನಡೆದಿದ್ದು, ಅಧಿಕಾರಿಗಳೇ ತೋಟಗಾರಿಕೆ ಇಲಾಖೆ ಸಚಿವರ ಮುಂದೆ ಇಲ್ಲಿನ ಅವ್ಯವಸ್ಥೆಯನ್ನು ಬಹಿರಂಗ ಪಡಿಸಿದ್ದಾರೆ.
ರಾಮನಗರ ಮತ್ತು ಚನ್ನಪಟ್ಟಣದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವು ಖರೀದಿ ಭರ್ಜರಿಯಾಗಿಯೇ ನಡೆಯುತ್ತದೆ. ಆದರೆ ಇಲ್ಲಿ ನಡೆಯುವ ವಹಿವಾಟಿನ ಲೆಕ್ಕಾಚಾರ ಸಿಗುತ್ತಿಲ್ಲ ಎನ್ನುವ ಸತ್ಯವನ್ನು ಅಧಿಕಾರಿಗಳೇ ಸಚಿವರ ಮುಂದೆ ಬಾಯಿ ಬಿಟ್ಟಿದ್ದಾರೆ.
ಲೆಕ್ಕಕ್ಕೆ ಸಿಗುತ್ತಿಲ್ಲ: ರಾಜ್ಯದಲ್ಲಿಯೇ ಪ್ರಥಮವಾಗಿ ಮಾರುಕಟ್ಟೆಗೆ ಪ್ರವೇಶ ಮಾಡುವುದು ರಾಮನಗರ ಜಿಲ್ಲೆಯ ಮಾವು. ಇದರಿಂದಾಗಿ ಆರಂಭದ ದಿನಗಳಲ್ಲಿಯೇ ಇಲ್ಲಿ ಮಾವಿನ ವಹಿವಾಟು ಹೆಚ್ಚಾಗಿ ನಡೆಯುತ್ತದೆ. ರಾಮನಗರ ಮತ್ತು ಚನ್ನಪಟ್ಟಣ ಎಪಿಎಂಸಿ ಆವರಣದಲ್ಲಿಯೇ ಮಾವು ಖರೀದಿ ಮಂಡಿಗಳನ್ನು ತೆರೆದು ವ್ಯಾಪಾರ ಮಾಡಲಾಗುತ್ತದೆ. ಕೆಲವರು ಖಾಸಗಿಯಾಗಿಯೂ ಮಂಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಾರೆ. ಇವುಗಳಲ್ಲಿ ಚನ್ನಪಟ್ಟಣದಲ್ಲಿ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿಯೇ ಹೆಚ್ಚಿನ ಮಾವು ಖರೀದಿ ಮಂಡಿಗಳನ್ನು ತೆರೆಯಲಾಗುತ್ತದೆ. ಆದರೆ ಎಲ್ಲಿಯೂ ಎಪಿಎಂಸಿ ಆವರಣಕ್ಕೆ ಬರುವ ಮತ್ತು ಇಲ್ಲಿಂದ ಹೊರ ರಾಜ್ಯಗಳಿಗೆ ತೆರಳುವ ಮಾವಿನ ಪ್ರಮಾಣದ ಲೆಕ್ಕ ಸಿಗುವುದೇ ಇಲ್ಲ. ಸಾಮಾನ್ಯವಾಗಿ ರಾಮನಗರದಲ್ಲಿ ಪ್ರತಿವರ್ಷ 2.5 ಲಕ್ಷ ಟನ್ ಮಾವು ಮಾರುಕಟ್ಟೆಗೆ ಬರುತ್ತದೆ ಎನ್ನುವುದು ಅಧಿಕಾರಿಗಳ ಅಂದಾಜು. ಇದರಲ್ಲಿ ಅಲ್ಪ ಪ್ರಮಾಣದ ಮಾವು ಮಾತ್ರ ನೇರ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ. ಉಳಿದಂತೆ ಬರುವ ಶೇ.80ಕ್ಕೂ ಹೆಚ್ಚು ಪ್ರಮಾಣದ ಮಾವಿನ ಲೆಕ್ಕ ಇಲ್ಲಿ ಸಿಗುವುದೇ ಇಲ್ಲ. ಕಳೆದ ಸಾಲಿನಲ್ಲಿ ಎರಡೂ ಎಪಿಎಂಸಿಗಳಿಂದ ಕೇವಲ 16 ಸಾವಿರ ಟನ್ ಮಾವು ಮಾರುಕಟ್ಟೆಗೆ ಬಂದಿರುವ ಲೆಕ್ಕ ಸಿಕ್ಕಿದೆ. ಉಳಿದ ಮಾವಿನ ಬಗ್ಗೆ ಲೆಕ್ಕವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಬಿಳಿ ಚೀಟಿ ದಂಧೆ: ಇನ್ನು ಮಾವು ಮಾರಾಟ ಮಾಡುವ ರೈತರಿಗೆ ಯಾವುದೇ ಮಂಡಿಯಿಂದಲೂ ಅಧಿಕೃತವಾದ ರಸೀದಿ ದೊರೆಯುವುದೇ ಇಲ್ಲ. ಬದಲಿಗೆ ಇಲ್ಲಿಯೂ ಬಿಳಿ ಚೀಟಿಯಲ್ಲಿಯೇ ಮಾವು ಮಾರಾಟದ ಮಾಹಿತಿಯನ್ನು ನೀಡಲಾಗುತ್ತದೆ. ಒಂದು ವೇಳೆ ಯಾವುದೇ ರೈತ ಮಾವು ಖರೀದಿಗೆ ಅಧಿಕೃತ ರಸೀದಿ ಕೇಳಿದರೂ ಅಂತಹ ರೈತರ ಮಾವು ಖರೀದಿ ಮಾಡಲು ಹಿಂದುಮುಂದು ನೋಡಲಾಗುತ್ತದೆ. ಇಲ್ಲವೇ ಕಡಿಮೆ ಬೆಲೆಗೆ ನಿಗದಿ ಮಾಡಿ ರೈತರಿಗೆ ತೊಂದರೆ ಕೊಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತ ಸುಮ್ಮನೆ ತೊಂದರೆಗೆ ಒಳಗಾಗಲು ಇಷ್ಟಪಡದೇ ಬಿಳಿಚೀಟಿಯನ್ನು ಪಡೆದು ಮಾವು ಮಾರಾಟ ಮಾಡುತ್ತಾನೆ.
ಕಮೀಷನ್ಗೆ ಕಡಿವಾಣವಿಲ್ಲ: ಇನ್ನು ಮಾರುಕಟ್ಟೆಯಲ್ಲಿ ರೈತರಿಂದ ಶೇ.10 ಕಮಿಷನ್ ಅನ್ನು ಪಡೆಯಲಾಗುತ್ತದೆ. ಇದು ಅನಧಿಕೃತ ಎನ್ನುವುದು ಗೊತ್ತಿದ್ದರೂ ಅಧಿಕಾರಿಗಳನ್ನು ಇದನ್ನು ನಿಯಂತ್ರಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಶೇ.10 ಕಮಿಷನ್ ಕೊಡುವ ಜತೆಗೆ ಪ್ರತಿ ಕ್ರೇಟ್ ಮಾವು ಮಾರಾಟದ ಮಾಡಿದ ಮೇಲೆ ಕ್ರೇಟ್ ತೂಕ 2 ಕೆಜಿ ಮತ್ತು ಹೆಚ್ಚುವರಿಯಾಗಿ ಮತ್ತೆರಡು ಕೆಜಿ ಒಟ್ಟು ನಾಲ್ಕು ಕೆಜಿಯನ್ನು ಕಳೆಯಲಾಗುತ್ತದೆ. ಇದರಿಂದಲೂ ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಕಡಿವಾಣಕ್ಕೆ ಸಚಿವರ ಕರೆ: ಮಾವು ಮಂಡಿಗಳಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತೋಟಗಾರಿಕೆ ಸಚಿವ ಮುನಿರತ್ನ ಸೂಚನೆಯನ್ನು ನೀಡಿದ್ದಾರೆ. ರೈತರಿಂದ ಪಡೆಯುತ್ತಿರುವ ಕಮಿಷನ್ ಪ್ರಮಾಣ ಶೇ10ರಿಂದ 3ಕ್ಕೆ ಇಳಿಯಬೇಕು. ಬಾಕಿ ಹಣ ಸಂಪೂರ್ಣವಾಗಿ ರೈತರಿಗೆ ಸೇರಬೇಕು. ಈ ನಿಟ್ಟಿನಲ್ಲಿ ಎಲ್ಲ ನೆರವನ್ನು ನೀಡಲು ಸಿದ್ಧವಿರುವುದಾಗಿ ಘೋಷಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಮಾವಿನ ಮಂಡಿಯಲ್ಲಿ ರೈತರಿಗೆ ಅಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು.
ಮಾವಿನ ಮಂಡಿಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸಚಿವರ ಗಮನಕ್ಕೆ ತರಲಾಗಿದೆ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ತೋಟಗಾರಿಕೆ ಮತ್ತು ಎಪಿಎಂಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸಿ.ಪುಟ್ಟಸ್ವಾಮಿ, ರೈತ ಮುಖಂಡ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ರೈತರೇ ಸಂಟಿತರಾಗಿ ಖರೀದಿಗೆ ಮುಂದಾಗಬೇಕು. ಇದಕ್ಕೆ ಬೇಕಾದ ಮೂಲ ಬಂಡವಾಳ ಮತ್ತು ಜಾಗ ಒದಗಿಸಲು ಸಿದ್ಧ. ಮುನಿರತ್ನ, ತೋಟಗಾರಿಕೆ ಸಚಿವ