ಬೀದರ್: ನಗರ ಸೇರಿ ಜಿಲ್ಲಾದ್ಯಂತ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗಿನ ಜಾವದವರೆಗೆ ಸುರಿದ ಮಳೆ ರೈತರ ಮುಖದಲ್ಲಿ ಕಳೆ ತಂದಿದೆ. ವಿವಿಧೆಡೆ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸಿದ್ದು, ದಿನವೂ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ.
ಹುಮನಾಬಾದ್, ಬಸವಕಲ್ಯಾಣ, ಬೀದರ್ ತಾಲೂಕುಗಳಲ್ಲಿ ಮಳೆ ಒಂದಿಷ್ಟು ಜಾಸ್ತಿಯಿದೆ. ಜಿಲ್ಲೆಯ ವಿವಿಧೆಡೆ ಬತ್ತಿ ಹೋಗಿದ್ದ ಹಳ್ಳ, ಕೊಳ್ಳಗಳಿಗೆ ನೀರು ಬರುತ್ತಿದೆ.
ಶನಿವಾರ ಬೆಳಗ್ಗೆ 8ರಿಂದ ಭಾನುವಾರ ಬೆಳಗ್ಗೆ 8ರವರೆಗೆ ಜಿಲ್ಲಾದ್ಯಂತ 19 ಮಿಮೀ ಮಳೆಯಾಗಿದೆ. ಹುಮನಾಬಾದ್ ತಾಲೂಕಿನಲ್ಲಿ 30 ಮಿಮೀ, ಬಸವಕಲ್ಯಾಣ 27, ಬೀದರ್ 16, ಭಾಲ್ಕಿ 14 ಹಾಗೂ ಔರಾದ್ ತಾಲೂಕಿನಲ್ಲಿ 10 ಮಿಮೀ ಮಳೆಯಾಗಿದೆ. ಮೋಡಕವಿದ ವಾತಾವರಣ ಮುಂದುವರಿದಿದ್ದು, ಆಗಾಗ್ಗೆ ಅಲ್ಲಲ್ಲಿ ಮಳೆ ಆಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಭಾಲ್ಕಿ ತಾಲೂಕಿನ ಹಾಲಹಿಪ್ಪರ್ಗಾ ಗ್ರಾಮದಲ್ಲಿ ಸುರಿದ ಮಳೆಯಿಂದ ಹಳ್ಳ ತುಂಬಿ ಹರಿದು ಸುತ್ತಮುತ್ತಲಿನ ಹೊಲದ ಮಣ್ಣು ಕೊಚ್ಚಿ ಹೋಗಿದೆ. ಬಿತ್ತನೆ ಮಾಡಿದ ಮೂಳಕೆ ಹಾನಿಗೀಡಾಗಿದೆ. ಮಳೆ ನೀರಿನ ರಭಸಕ್ಕೆ ಸೇತುವೆ ಗೋಡೆ ಒಡೆದಿದೆ.