ಹುಬ್ಬಳ್ಳಿ: ರೈತರು ಸ್ವಾವಲಂಬಿ ಜೀವನ ನಡೆಸಬೇಕಿದೆ. ಅದಕ್ಕಾಗಿ ದೇಶದ ಪ್ರತಿಯೊಬ್ಬ ರೈತರನ್ನು ಸಂಘಟಿಸುವುದು ಮುಖ್ಯ. ಸಂಘದ ಕಾರ್ಯಕರ್ತರು ಶ್ರದ್ಧೆ, ನಿಷ್ಠೆಯಿಂದ ಈ ಕಾರ್ಯದಲ್ಲಿ ತೊಡಗಬೇಕು ಎಂದು ಭಾರತೀಯ ಕಿಸಾನ್ ಸಂಘದ ಕ್ಷೇತ್ರ ಸಂಘಟನೆ ಕಾರ್ಯದರ್ಶಿ ದೊಣೂರು ರಾಮು ತಿಳಿಸಿದರು.
ನಗರದ ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ ಪ್ರಾಂತ ರೈತ ಸಮ್ಮೇಳನದ ಸಮಾರೋಪದಲ್ಲಿ ಮಂಗಳವಾರ ಅವರು ಮಾತನಾಡಿದರು.
ಪ್ರತಿಯೊಬ್ಬ ಸಂಘದ ಕಾರ್ಯಕರ್ತರು ಸಾಮೂಹಿಕ ನಿರ್ಣಯದಿಂದ ಕಾರ್ಯ ನಿರ್ವಹಿಸಬೇಕಾಗಿದೆ. ರೈತರ ಮನೆ ಮನೆಗೆ ಹೋಗಿ ಅವರನ್ನು ಭಾರತೀಯ ಕಿಸಾನ್ ಸಂಘ ಏರ್ಪಡಿಸುವ ಸಭೆ ಮತ್ತು ಸಮಾರಂಭಗಳಲ್ಲಿ ಭಾಗವಹಿಸಲು ಕರೆತರಬೇಕಾಗಿದೆ. ನಂತರ ಸಂಘದ ವಿಚಾರಗಳನ್ನು ತಿಳಿಸಿ ರೈತರ ವಿಶ್ವಾಸಗಳಿಸುವ ಕಾರ್ಯವಾಗಬೇಕಾಗಿದೆ ಎಂದರು.
ರೈತ ದೇಶದ ಬೆನ್ನೆಲುಬು. ರಾಜ, ರೈತನಿಲ್ಲದೆ ದೇಶವಿಲ್ಲ ಎಂದು ಭಾಷಣ ಮಾಡುವವರು ರೈತರನ್ನು ಕಡೆಗಣಿಸುತ್ತಿದ್ದಾರೆ. ಇದು ಬದಲಾಗಬೇಕು. ಆದ್ದರಿಂದ ಸಂಘದ ಕಾರ್ಯಕರ್ತರು, ರೈತರ ಮನಸ್ಥಿತಿಯನ್ನು ಬದಲಾಯಿಸುವ ಮೂಲಕ ಸ್ವಾವಲಂಬಿ ಜೀವನ ನಡೆಸುವಂತೆ ಮಾಡಬೇಕಿದೆ ಎಂದರು.
ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರದೇಶ ಸಮಿತಿಗೆ ನೂತನವಾಗಿ ಆಯ್ಕೆಯಾಗಿರುವ ಭೀಮಸೇನಾ ಕೋಕರೆ ಮಾತನಾಡಿ, ಹವಾಮಾನ ವೈಪರೀತ್ಯದಿಂದ ರೈತರು ಬೆಳೆದ ಬೆಳೆಗಳು ನಾಶವಾಗುತ್ತಿವೆ. ತಂತ್ರಜ್ಞಾನ ಬಳಸಿಕೊಂಡು ಬರುವಂತಹ ಸಮಸ್ಯೆ ಎದುರಿಸಬೇಕು ಎಂದರು.
ಉತ್ತರ ಪ್ರಾಂತ ಅಧ್ಯಕ್ಷ ಗುರುನಾಥ ಶಂಕರ ಬಗಲಿ, ರಾಷ್ಟ್ರೀಯ ಅಧ್ಯಕ್ಷ ಐ.ಎನ್.ಬಸವೇಗೌಡ, ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವೀಣಾ ಸತೀಶ, ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಕಾಸರಗಟ್ಟ ಇದ್ದರು.
ನಿರ್ಣಯಗಳು