ಜಿಲ್ಲೆ

ರೈತರನ್ನು ದೇವರಂತೆ ಪರಿಗಣಿಸಿ

ಶಿವಮೊಗ್ಗ: ರೈತರನ್ನು ದೇವರಂತೆ ಪರಿಗಣಿಸಿ ಅವರಿಗೆ ಸೂಕ್ತ ನೆರವು ನೀಡಿ ಎಂದು ಆದಿಚುಂಚನಗಿರಿ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗೆ ಸಲಹೆ ನೀಡಿದರು.

ನವೀಕೃತಗೊಂಡ ಬ್ಯಾಂಕ್​ನ ಎಲ್ಲ ವಿಭಾಗಗಳಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಆಡಳಿತ ಮಂಡಳಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಬಡ ರೈತರಿಗೆ ಜಿಲ್ಲಾ ಸಹಕಾರ ಬ್ಯಾಂಕುಗಳೇ ಉಸಿರು. ರೈತರಿಗೆ ತಕ್ಷಣಕ್ಕೆ ನೆನಪಾಗುವುದು ಡಿಸಿಸಿ ಬ್ಯಾಂಕ್. ರೈತರು ಬ್ಯಾಂಕಿಗೆ ಬಂದಾಗ ಆತ ನಮ್ಮ ಗ್ರಾಹಕ ಮಾತ್ರವಲ್ಲ ದೇವರು ಎಂಬ ಭಾವನೆ ಎಲ್ಲರಲ್ಲೂ ಇರಬೇಕು ಎಂದರು.

ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗುವ ಸಂದರ್ಭದಲ್ಲಿ ಅತಿವೃಷ್ಟಿ ಅಥವಾ ಇನ್ನಿತರ ಕಾರಣಗಳಿಂದ ತಕ್ಕ ಬೆಲೆ ಸಿಗದೆ ರೈತ ಸಂಕಷ್ಟದಲ್ಲಿರುತ್ತಾನೆ. ಬ್ಯಾಂಕುಗಳು ಸಹಕರಿಸಿದರೆ ಮಾತ್ರ ತಾನು ಬೆಳೆದ ಬೆಳೆಯನ್ನು ಸಂಗ್ರಹಿಸಿ ಉತ್ತಮ ಬೆಲೆ ಬಂದಾಗ ಮಾರಲು ರೈತರಿಗೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅನೇಕ ಸಂಕಷ್ಟಗಳ ನಡುವೆಯೂ ಉತ್ತಮ ಸಾಧನೆ ಮಾಡಿದೆ. ದಾಖಲೆ ಪ್ರಮಾಣದಲ್ಲಿ ರೈತರಿಗೆ ಆರ್ಥಿಕ ನೆರವು ನೀಡಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ ಎಂದು ಆಶಿಸಿದರು.

ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ನಿರ್ದೇಶಕರಾದ ಜಿ.ಪಿ.ಯೋಗೀಶ್, ಎಚ್.ಎಲ್.ಷಡಾಕ್ಷರಿ, ಕೆ.ಪಿ.ದುಗ್ಗಪ್ಪ ಗೌಡ, ಜಿ.ಎನ್.ಸುಧೀರ್, ವ್ಯವಸ್ಥಾಪಕ ನಿರ್ದೇಶಕ ರಾಜಣ್ಣ ರೆಡ್ಡಿ ಇದ್ದರು.