ಜಿಲ್ಲೆ

ರೈತರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಕ್ರಮ - ರಮೇಶ ಕತ್ತಿ

ಸಂಕೇಶ್ವರ: ಮೂವತ್ತು ವರ್ಷ ಇತಿಹಾಸ ಹೊಂದಿರುವ ಪಟ್ಟಣದ ಕಾಯಿಪಲ್ಲೆ ಮಾರುಕಟ್ಟೆ ಸಮಿತಿ ರೈತರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದೆ. ರೈತ ಸಂಘಟನೆಗಳು ಪ್ರತಿಭಟನೆ ಹಿಂಪಡೆಯಬೇಕು ಎಂದು ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮನವಿ ಮಾಡಿದರು.

ಪಟ್ಟಣದ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಬುಧವಾರ ಏರ್ಪಡಿಸಿದ್ದ ರೈತರ ಹಾಗೂ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿ, ರೈತ ಸಂಘಟನೆಗಳು ಇಟ್ಟಿರುವ ಬೇಡಿಕೆ ನ್ಯಾಯ ಸಮ್ಮತವಾಗಿದೆ. ನೂತನ ಸಮಿತಿ ರಚಿಸಿ ಅದರಲ್ಲಿ ರೈತರು ಹಾಗೂ ವ್ಯಾಪಾರಸ್ಥರನ್ನು ಸದಸ್ಯರನ್ನಾಗಿಸಿ ರೈತರ ಏಳ್ಗೆಗೆ ಸಹಕರಿಸಲಾಗುವುದು ಎಂದರು.

ಈಗಿರುವ ಕರ ಸಂಗ್ರಹ ಪದ್ಧತಿ ರೈತರಿಗೆ ಅನುಕೂಲವಾಗುವಂತೆ ಮಾರ್ಪಡು ಮಾಡಲು ಸೂಚಿಸಲಾಗಿದೆ. ಗುತ್ತಿಗೆ ಪದ್ಧತಿ ರದ್ದುಪಡಿಸಿ ಆಡಳಿತದಿಂದಲೇ ಮಾರುಕಟ್ಟೆ ವ್ಯವಸ್ಥೆ ನಿರ್ವಹಿಸಲಾಗುತ್ತದೆ. ತಾಲೂಕಿನ ರೈತರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

ಹಸಿರು ಸೇನೆ ರಾಜ್ಯಾಧ್ಯಕ್ಷ ರಮೇಶ ಇಳಗೇರ ಮಾತನಾಡಿ, ಪಟ್ಟಣದ ಕಾಯಿಪಲ್ಲೆ ಮಾರುಕಟ್ಟೆ ರೈತರಿಗೆ ಅನುಕೂಲ ಕಲ್ಪಿಸಿದೆ. ರೈತ ಸಂಘಟನೆಗಳ ಬೇಡಿಕೆ ಪೂರೈಸುವ ಭರವಸೆ ನೀಡಿದೆ. ಹಾಗಾಗಿ ಮಾರುಕಟ್ಟೆಯಲ್ಲಿಯೇ ವಹಿವಾಟು ನಡೆಸಿದರೆ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.
ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀಮಠ ಕೃಷಿ ಪರಂಪರೆ ಹೊಂದಿದೆ. ರೈತರಿಗೆ ಅಭಿವೃದ್ಧಿಗೆ ಬೇಕಾಗುವ ಅನುಕೂಲತೆ ಕಲ್ಪಿಸಲಾಗುವುದು ಎಂದರು.

ಮುಖಂಡ ಸಂತೋಷ ಪಾಟೀಲ ಮಾತನಾಡಿದರು. ಧರೆಖಾನ ಶ್ರೀ, ಮುಖಂಡರಾದ ಅಪ್ಪಾಸಾಹೇಬ ಶಿರಕೋಳಿ, ರಾಜೇಂದ್ರ ಪಾಟೀಲ, ಗಜಾನನ ಕ್ವಳ್ಳಿ, ಅಮರ ನಲವಡೆ, ಶ್ರೀಕಾಂತ ಹತನೂರೆ, ಸಂಜಯ ಶಿರಕೋಳಿ, ಶಿವಾನಂದ ಮುಡಸಿ, ಅಜಿತ ಕರಜಗಿ, ಪ್ರಶಾಂತ ಪಾಟೀಲ, ರೋಹಣ ನೇಸರಿ, ಕುಮಾರ ಬಸ್ತವಾಡಿ, ಸಂತೋಷ ಕಮನೂರಿ, ಸುನೀಲ ಪಾಟೀಲ, ಮನ್ಸೂರ ಬಾಗವಾನ, ಮಲ್ಲಿಕಾರ್ಜುನ ಖಾನಾಯಿ, ಬಸವಪ್ರಭು ವಂಟಮೂರಿ, ಸಂಜಯ ಪಾಟೀಲ ಇತರರು ಇದ್ದರು.