ಹುಕ್ಕೇರಿ: ತಾಲೂಕಿನ ಬಡಕುಂದ್ರಿ ಗ್ರಾಮಸ್ಥರ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಜಿ ಶಾಸಕ ದಿ. ಉಮೇಶ ಕತ್ತಿ ಅವರ ಅನುದಾನದಡಿ ಮಂಜೂರಾದ ೧ ಕೋಟಿ ರೂ. ವೆಚ್ಚದಲ್ಲಿ ಬೀದಿದೀಪ ಅಳವಡಿಸಲಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ಬಡಕುಂದ್ರಿ ಗ್ರಾಮದಲ್ಲಿ ಅಳವಡಿಸಿದ ಬೀದಿದೀಪಗಳನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ರೈತರ ಆಗ್ರಹದ ಮೇರೆಗೆ ಮೇ ೧೪ರಿಂದ ೧೦ ದಿನಗಳ ವರೆಗೆ ಕುಡಿಯುವ ನೀರಿಗಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ, ಘಟಪ್ರಭಾ ಎಡದಂಡೆ ಕಾಲುವೆ, ಕೊಟಬಾಗಿ ಏತ ನೀರಾವರಿ ಯೋಜನೆಗೆ ಪ್ರತಿದಿನ ೨,೬೫೦ ಕ್ಯೂಸೆಕ್, ಘಟಪ್ರಭಾ ಬಲದಂಡೆ ಕಾಲುವೆಗೆ ಪ್ರತಿದಿನ ೨,೧೦೦ ಕ್ಯೂಸೆಕ್, ಚಿಕ್ಕೋಡಿ ಉಪ ಕಾಲುವೆಗೆ ಪ್ರತಿದಿನ ೫೫೦ ಕ್ಯೂಸೆಕ್ ಸೇರಿ ಒಟ್ಟು ೪.೫೭೮ ಟಿಎಂಸಿ ನೀರು ಹರಿಸಲು ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. ಈ ನೀರನ್ನು ಕೃಷಿಗೆ ಬಳಸದಿರಲು ಷರತ್ತು ವಿಧಿಸಿದ್ದಾರೆ. ಆದ್ದರಿಂದ ನೀರನ್ನು ಹಿತಮಿತವಾಗಿ ಬಳಸುವಂತೆ ರೈತರಲ್ಲಿ ಶಾಸಕರು ವಿನಂತಿಸಿಕೊಂಡರು.
ಕುಡಿಯುವುದಕ್ಕಾಗಿ ಹಿರಣ್ಯಕೇಶಿ ನದಿಗೆ ಮಹಾರಾಷ್ಟ್ರದ ಚಿತ್ರಿ ಜಲಾಶಯದಿಂದ ನೀರು ಬಿಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಈ ವಿಷಯವನ್ನು ಸಚಿವ ಸತೀಶ ಜಾರಕಿಹೊಳಿ ಅವರ ಗಮನಕ್ಕೆ ತಂದಿರುವೆ.
ಗ್ರಾಮಸ್ಥರು ಶಾಸಕ ನಿಖಿಲ ಕತ್ತಿ ಮತ್ತು ಯುವ ಧುರೀಣ ಪವನ ಕತ್ತಿ ಅವರನ್ನು ಸನ್ಮಾನಿಸಿದರು.
ಮಹಾದೇವಿ ಈರಗಾರ, ಉಪಾಧ್ಯಕ್ಷ ವಿಠ್ಠಲ ಪೂಜೇರಿ, ಸಿದ್ದು ಮಾನಗಾಂವಿ, ಪರಪ್ಪ ವಾಸೇದಾರ, ಮಲ್ಲು ಗುಡಸಿ, ಶ್ರೀಶೈಲ ವಾಸೇದಾರ, ಚಿದಾನಂದ ಮಾನಗಾಂವಿ, ಶಂಕರ ಶಿರಹಟ್ಟಿ, ಪರಪ್ಪ ಮಗದುಮ್ಮಇತರರಿದ್ದರು. ಎಚ್.ಎಲ್.ಪೂಜೇರಿ ಸ್ವಾಗತಿಸಿದರು. ಆನಂದ ಚೌಗಲಾ ವಂದಿಸಿದರು.