ಹಾಸನ: ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ, ಆದರೆ,ರಾಜ್ಯ ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮನವರಿಕೆ ಮಾಡಿಕೊಳ್ಳುವಲ್ಲಿ ವಿಫಲವಾಗುವ ಮೂಲಕ ರೈತರ ಹಿತ ಕಾಯಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹಾಸನ ಹಾಲು ಒಕ್ಕೂಟದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನೀರಾವರಿ ಮಂತ್ರಿಗಳೇ ನಮ್ಮ ರಾಜ್ಯದಲ್ಲಿ ಸಾಕಷ್ಟು ನೀರಿದೆ. ಯಾವುದೇ ರೀತಿ ಸಮಸ್ಯೆ ಇಲ್ಲ ಎಂದು ಕೇಳುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ. ನಮ್ಮ ರಾಜ್ಯದ ರೈತರ ಹಿತ ಕಾಯುವ ಬದಲು ತಮಿಳನಾಡಿನ ರೈತರ ಹಿತ ಕಾಯಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಈಗಾಗಲೇ ನಮ್ಮ ರಾಜ್ಯದಲ್ಲಿ ಬೆಳೆಗಳೆಲ್ಲ ಸಂಪೂರ್ಣವಾಗಿ ನಾಶವಾಗಿದೆ. ದನ ಕರುಗಳಿಗೆ ಕುಡಿಯಲು ನೀರಿಲ್ಲ, ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ಮೂರನೇ ಬೆಳೆ ಬೆಳೆಯಲು ನೀರು ಹರಿಸುತ್ತಿರುವುದು ಎಷ್ಟು ಸರಿ, ಸರ್ಕಾರ ನಮ್ಮ ರಾಜ್ಯದ ರೈತರ ಹಿತ ಕಾಯುವ ಬದಲು ತಮಿಳುನಾಡಿನ ರೈತರ ಹಿತ ಕಾಯುತ್ತಿದ್ದಾರೆ ಎಂದು ಆರೋಪಿಸಿದರು.
ಐಎನ್‌ಡಿಐಎ ಮೈತ್ರಿ ಮಾಡಿಕೊಳ್ಳುವ ಉದ್ದೇಶದಿಂದ ನಮ್ಮ ರಾಜ್ಯವನ್ನು ತಮಿಳುನಾಡಿಗೆ ಹಡಮಾನ ಇಡಲು ಹೊರಟಿದ್ದಾರೆ. ನಮಗೆ ಒಂದು ಬೆಳೆ ಬೆಳೆಯಲು ನೀರು ನೀಡಲಿಲ್ಲ, ಕುಡಿಯಲು ನೀರಿನ ಅಭಾವ ಎದುರಾಗಲಿದೆ,ಇಂಥ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಇದಕ್ಕೆ ಈಗಾಗಲೇ ನಮ್ಮ ಪಕ್ಷದ ವತಿಯಿಂದ ನಿರ್ಣಯ ಕೈಗೊಂಡು ಈ ಹಿಂದೆಯೇ ಸರ್ಕಾರಕ್ಕೆ ನೀರು ಬಿಡದಂತೆ ಮನವಿ ಮಾಡಲಾಗಿತ್ತು ಎಂದು ಹೇಳಿದರು.
ಹೈಕೋರ್ಟ್ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇವಣ್ಣ ಈ ಬಗ್ಗೆ ನನಗೆ ಗೊತ್ತಿಲ್ಲ ಎಂದರು