ಗುಂಡ್ಲುಪೇಟೆ: ತಾಲೂಕಿನ ಬೊಮ್ಮಲಾಪುರದಲ್ಲಿ ಮಂಗಳವಾರ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಾಮರಾಜನಗರ ಜಿಲ್ಲೆಯ ಮುಖಂಡರು ಹಾಗೂ ಗ್ರಾಮಸ್ಥರು ಸಭೆ ಸೇರಿ ರೈತರ ಹಿತಾಸಕ್ತಿ ಕಾಪಾಡಲು ಹಲವು ಹೋರಾಟಗಳನ್ನು ಕೈಗೊಳ್ಳುವ ನಿರ್ಣಯಕ್ಕೆ ಬಂದಿದ್ದಾರೆ.
ಸಭೆಯಲ್ಲಿ ಸಾಮೂಹಿಕ ನಾಯಕತ್ವದ ರಾಜ್ಯಸಮಿತಿಯ ಸದಸ್ಯ ಹೊನ್ನೂರು ಪ್ರಕಾಶ್ ಮಾತನಾಡಿ, ಬೊಮ್ಮಲಾಪುರದಲ್ಲಿ ಕಳೆದ ಮೂರು ನಾಲ್ಕು ತಿಂಗಳಿಂದ ಹುಲಿ ಹಾವಳಿಯಿಂದ ರೋಸಿಹೋಗಿದ್ದ ಗ್ರಾಮಸ್ಥರು ಸೆ.9ರಂದು ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ಮಾಡಲು ಅರಣ್ಯ ಸಿಬ್ಬಂದಿಯನ್ನು ಬೋನಿನೊಳಗೆ ಕೂಡಿಹಾಕಿದ್ದರು. ಈ ಬಗ್ಗೆ ಅರಣ್ಯ ಇಲಾಖೆ 5 ಜನ ಗ್ರಾಮಸ್ಥರ ವಿರುದ್ಧ ದೂರು ನೀಡಿದೆ. ಪ್ರಕರಣದಲ್ಲಿ ಹೆಸರಿಸಿದ ರೈತರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿಲ್ಲದ ಕಾರಣ ಹೈಕೋರ್ಟ್ ಮೆಟ್ಟಲಿರುವಂತಾಗಿದೆ.
ಇತ್ತ ವನ್ಯಜೀವಿಗಳ ದಾಳಿಯಿಂದ ಸಂತ್ರಸ್ತರಾದ ರೈತರು ಬೆಳೆಹಾನಿಯಿಂದ ಜೀವನೋಪಾಯಕ್ಕೆ ತೊಂದರೆಯಾಗಿರುವ ಜತೆಗೆ ನ್ಯಾಯಾಲಯದ ಖರ್ಚೂ ಸೇರಿಕೊಂಡಿದ್ದು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ರೈತ ಸಂಘ ಭ್ರಷ್ಟ ಅಧಿಕಾರಿಗಳು ರೈತರ ಮೇಲೆ ಸುಳ್ಳು ಕೇಸು ಹಾಕಿದ ಸಂದರ್ಭದಲ್ಲಿ ರೈತರಿಗೆ ಕಾನೂನು ನೆರವಿಗೆ ಬರುತ್ತದೆ ಹಾಗೂ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲ ರೈತರಿಂದ ಸಹಾಯಧನ ಸಂಗ್ರಹಿಸಿ ನ್ಯಾಯಾಲಯದ ವೆಚ್ಚವನ್ನು ಭರಿಸಲಾಗುವುದು ಎಂದು ಹೇಳಿದರು.
ರೈತರು ತಮ್ಮ ಜಮೀನುಗಳಲ್ಲಿ ಬೆಳೆಯುವ ಕಾಯಕ ನಡೆಸಿದರೆ ವನ್ಯಜೀವಿಗಳು ಕಾಡಿನಿಂದ ಹೊರಬರದಂತೆ ಕಣ್ಗಾವಲು ನಡೆಸುವುದು ಆರಣ್ಯ ಇಲಾಖೆಯ ಕರ್ತವ್ಯವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ರೈತರ ಜಮೀನುಗಳಿಗೆ ವನ್ಯಜೀವಿಗಳು ದಾಳಿ ಮಾಡಿ ಪ್ರಾಣ ಹಾನಿ ಮತ್ತು ಬೆಳೆ ನಷ್ಟವಾದರೆ ಅದಕ್ಕೆ ಕಾರಣರಾದ ಅರಣ್ಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗುತ್ತದೆ. ಮುಂದಿನ 15 ದಿನ ಅರಣ್ಯ ಇಲಾಖೆಯು ಬೊಮ್ಮಲಾಪುರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಗುಂಡ್ಲುಪೇಟೆಯಿಂದ ಬಂಡಿಪುರವರೆಗೂ ಪಾದಯಾತ್ರೆ ಕೈಗೊಳ್ಳಲಾಗುವುದು. ಎರಡನೇ ಹಂತದಲ್ಲಿ ಬಂಡಿಪುರಕ್ಕೆ ಬರುವ ಎಲ್ಲ ಸಚಿವರಿಗೂ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು. ಮೂರನೇ ಹಂತದಲ್ಲಿ ಉಗ್ರವಾದ ಹೋರಾಟಗಳು ಪ್ರಾರಂಭ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಥಳದಲ್ಲಿಯೇ 10,300 ರೂ.ಗಳನ್ನು ಸಂಗ್ರಹಿಸಿ ಕಾನೂನು ಹೋರಾಟಕ್ಕೆ ಬಳಸುವಂತೆ ಮುಖಂಡರಿಗೆ ಕೊಡಲಾಯಿತು. ಇನ್ನು ಮುಂದೆ ಜಿಲ್ಲಾದ್ಯಂತ ನಿಧಿ ಸಂಗ್ರಹಿಸಲು ತೀರ್ಮಾನಿಸಲಾಯಿತು. ಚಂಗಡಿ ಕರಿಯಪ್ಪ, ಅಂಬಳೆ ಶಿವಕುಮಾರಸ್ವಾಮಿ, ಚಾಮಲಾಪುರದ ಸಿದ್ದಲಿಂಗಸ್ವಾಮಿ, ಮಾಡ್ರಳ್ಳಿ ಪಾಪಣ್ಣ, ಹನೂರಿನ ಅಮೋಘ, ಎಸ್.ಮಾದಪ್ಪ, ಕುಮಾರಪುರದ ಮಹೇಶ್, ಶಿವಪುರ ಸಿದ್ದಪ್ಪ, ನಾಗೇಂದ್ರ, ಕೆಕೆ ಹುಂಡಿ ಪ್ರಸಾದ್, ಗುರು, ಬೆಟ್ಟದಪುರದ ಬಸವಣ್ಣ, ಕೊತ್ತಲವಾಡಿ ಮಂಜು, ಕೆ.ಎಸ್.ಶಿವಪ್ರಸಾದ್, ವಿ.ಎಸ್.ವಿಶ್ವಾಸ್ ಬೊಮ್ಮಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.