ಮೈಸೂರು: ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಒಂದು ಟನ್ ಕಬ್ಬಿಗೆ 5500 ರೂ. ನಿಗದಿಪಡಿಸುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ.16ರಂದು ‘ಬೆಳಗಾವಿ ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮಖಂಡ ಪಚ್ಚೆ ನಂಜುಂಡಸ್ವಾಮಿ ತಿಳಿಸಿದರು.
ರಾಜ್ಯದ ವಿವಿಧೆಡೆಗಳಿಂದ ಅಂದು ಬೆಳಗಾವಿಗೆ ಆಗಮಿಸುವ ರೈತರು ಬೆಳಗ್ಗೆ 9ಕ್ಕೆ ಅಲ್ಲಿನ ರೈತ ವೃತ್ತದಿಂದ ಸುವರ್ಣ ಸೌಧದವರೆಗೆ ಜಾಥಾ ಹೊರಡಲಿದ್ದು, ಬಳಿಕ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುವುದು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ 21 ರೈತ ಸಂಘಟನೆಗಳ ಮುಖಂಡರು ನೇತೃತ್ವ ವಹಿಸಲಿದ್ದಾರೆ ಎಂದು ರೈತ ಮಖಂಡ ಪಚ್ಚೆ ನಂಜುಂಡಸ್ವಾಮಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ಸಾಲ ಮುಕ್ತರೆಂದು ಘೋಷಿಸಬೇಕು, ಟನ್ ಕಬ್ಬಿಗೆ 5500 ರೂ., ನಿಗದಿಪಡಿಸಬೇಕು, 2021-22ನೇ ಸಾಲಿನ ಟನ್‌ಗಾಗಿನ 150 ರೂ., ಹಳೇ ಬಾಕಿ ಕೂಡಲೇ ಪಾವತಿ ಮಾಡಬೇಕು, ಬಗರ್‌ಹುಕುಂ ಸಾಗುವಳಿಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರಕ್ಕೆ ತಡೆಗೆ ಕ್ರಮ ವಹಿಸಬೇಕು. ನೈಜವಾಗಿ ಉಳುಮೆ ಮಾಡುವವರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರವು 5.9 ಕೋಟಿ ಬಿಪಿಎಲ್ ಕಾರ್ಡ್, ರಾಜ್ಯ ಸರ್ಕಾರ 13 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದು ಸರಿಯಲ್ಲ. ಸ್ವಾಮಿನಾಥನ್ ವರದಿಯನ್ನು ಯಥಾವತ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರಾದ ವಿದ್ಯಾಸಾಗರ ರಾಮೇಗೌಡ, ಇಮ್ಮಾವು ರಘು, ನಾಗರಾಜು, ಮಹದೇವ ನಾಯಕ, ನಂಜುಂಡ, ತಿಮ್ಮನಾಯಕ ಇದ್ದರು.