ಜಿಲ್ಲೆ

ರೈತರ ಸರಣಿ ಸಾವು ಸರ್ಕಾರಕ್ಕೆ ತಲೆನೋವು

ವಾದಿರಾಜ ವ್ಯಾಸಮುದ್ರ ಕಲಬುರಗಿ
ತೊಗರಿ ನಾಡಲ್ಲಿ ಅನ್ನದಾತನ ಸಾವಿನ ಸರಣಿ ಮುಂದುವರಿದಿದೆ. 10 ದಿನಗಳಲ್ಲಿ ಇಬ್ಬರು ರೈತರು ಸಾವಿಗೆ ಶರಣಾಗಿದ್ದು, ಕುಟುಂಬಗಳು ಅಕ್ಷರಶಃ ಬೀದಿಗೆ ಬಂದಿವೆ. ಇಂಥ ಸಂದರ್ಭದಲ್ಲಿ ಮಂಗಳವಾರದಿಂದ ಕೃಷಿ ಸಚಿವ ಬಿ.ಸಿ. ಪಾಟೀಲ್ ಕಲ್ಯಾಣ ಕನರ್ಾಟಕ ಪ್ರವಾಸ ಕೈಗೊಂಡಿರುವುದು ಕುತೂಹಲ ಮೂಡಿಸಿದೆ.
ಸಚಿವರ ಭೇಟಿಗೆ ಒಂದು ದಿನ ಮೊದಲೇ ಯಡ್ರಾಮಿ ತಾಲೂಕಿನ ಮಲ್ಲಾಬಾದ ಗ್ರಾಮದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಸಮಸ್ಯೆಯ ಗಂಭೀರತೆ ಎತ್ತಿ ತೋರಿಸುತ್ತಿದೆ. ಬೆಳೆದ ಬೆಳೆಗೆ ಸಮರ್ಪಕ ಬೆಲೆ ಬರದಿರುವುದು, ಮಾಡಿದ ಸಾಲ ತೀರಿಸಲಾಗದೆ ಒದ್ದಾಡುತ್ತಿರುವ ರೈತರು ಜಂಜಾಟವೇ ಬೇಡವೆಂದು ಸಾವಿನ ಬೆನ್ನು ಹತ್ತಿದ್ದಾರೆ. ಇದು ಅವರ ಕುಟುಂಗಳನ್ನು ಘಾಸಿಗೊಳಿಸಿವೆ.
ನಿಮ್ಮ ಜತೆ ನಾವಿದ್ದೇವೆ. ಸಾವಿಗೆ ಕೊರಳೊಡ್ಡಬೇಡಿ ಎಂದು ಸರ್ಕಾರ ಬೆಟ್ಟವನ್ನಷ್ಟೇ ತೋರಿಸುತ್ತಿದ್ದು, ಪರಿಹಾರ ಶೂನ್ಯವಾಗಿದೆ. ರೈತರ ಸಂಕಷ್ಟ ಹೋಗಿಸಲು ಸರ್ಕಾರ ಮುಂದಾಗಿದೆ ಎಂದು ಕೃಷಿ ಮತ್ತು ತೋಟಗಾರಿಕೆ ಸಚಿವರು ಹೇಳಿರುವುದು ಭರವಸೆಯಾಗಿ ಉಳಿದಿದೆ.
ಎಲ್ಲೆಡೆ ಕರೊನಾ ಮಹಾಮಾರಿ ಜೀವ ಹಿಂಡುತ್ತ ಎಲ್ಲ ಚಟುವಟಿಕೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಬಿಟ್ಟಿದೆ.
ಮನೆಯಲ್ಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ಹೊಡೆದೋಡಿಸಿ ಎಂದು ಮನವಿ ಮಾಡುತ್ತಿರುವ ಸರ್ಕಾರ, ಒಟ್ಟಾರೆ ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿದ್ದರಿಂದ ಮಾರುಕಟ್ಟೆಗೆ ಯಾವೊಂದು ವಸ್ತು ಬರದಂತಾಗಿದೆ.
ತಾವು ಬೆಳೆದ ವಸ್ತುಗಳು ಮಾರಾಟವಾಗದೆ ಹಾಳಾಗುತ್ತಿರುವುದನ್ನು ಕಣ್ಣಾರೆ ಕಂಡು ರೈತರು ತಮ್ಮ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲಾಗದೆ ಮತ್ತು ಸಾಲಬಾಧೆ ತಾಳದೆ ಕೊರಳಿಗೆ ಕುಣಿಕೆ ಹಾಕಿಕೊಳ್ಳುತ್ತಿದ್ದಾರೆ.
ತನ್ನ ಜಮೀನಿನಲ್ಲಿ ಬೆಳೆದ ಕಲ್ಲಂಗಡಿ ಮಾರಿ ಲಾಭ ಸಂಪಾದಿಸಬೇಕೆಂದು ನಿರ್ಧರಿಸಿದ್ದ ಆಳಂದ ತಾಲೂಕಿನ ಲಾಡಚಿಂಚೋಳಿ ರೈತ ಚಂದ್ರಕಾಂತ ಬಿರಾದಾರ(45)ಗೆ ಹಣ್ಣು ಮಾರಲು ಅವಕಾಶವೇ ಸಿಗಲಿಲ್ಲ. ಕರೊನಾದಿಂದ ಲಾಕ್ಡೌನ್ ಘೋಷಿಸಿದ್ದರಿಂದ ಮಾರುಕಟ್ಟೆಗೆ ಹಣ್ಣು ಸಾಗಿಸುವುದೇ ಕಷ್ಟವಾಯಿತು. ಬೆಳೆದ ಹಣ್ಣು ಕೊಳೆಯಲಾರಂಭಿಸಿತು. ಇದರಿಂದ ಕುಗ್ಗಿದ ಬಿರಾದಾರ ತಮ್ಮ ಜಮೀನಿನಲ್ಲಿರುವ ಹುಣಸೆ ಮರಕ್ಕೆ ನೇಣು ಹಾಕಿಕೊಂಡುಬಿಟ್ಟ.
ಈ ಸಾವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸಕರ್ಾರ ಕೆಲವು ಕ್ರಮಗಳನ್ನೇನೋ ತಕ್ಷಣ ಪ್ರಕಟಿಸಿತು. ಆದರೆ ಅವುಗಳೆಲ್ಲ ಆಶಾಗೋಪುರಗಳಾದವೇ ಹೊರತು, ಜಾರಿಯಾಗಲಿಲ್ಲ. ಜಾರಿಯಾದರೂ ರೈತರಿಗೆ ಗೊತ್ತೂ ಆಗಲಿಲ್ಲ. ಈ ರೈತನ ಸಾವು ಜನಮಾನಸದಿಂದ ಮರೆಯಾಗುವ ಮೊದಲೇ ಮಲ್ಲಾಬಾದ ಗ್ರಾಮದ ಕಾಳಪ್ಪ ಕುಂಬಾರ(57) ರೈತ ಸಾವಿಗೆ ಶರಣಾಗಿದ್ದಾನೆ. ಈತ ತೊಗರಿ ಬೆಳೆದಿದ್ದ. ಆದರೆ ಬೆಳೆ ನಿರೀಕ್ಷೆಗೆ ತಕ್ಕಂತೆ ಬರಲಿಲ್ಲ. ಹೀಗಾಗಿ ಬ್ಯಾಂಕು, ಸಹಕಾರಿ ಸಂಘ ಮತ್ತು ಖಾಸಗಿಯಾಗಿ ಮಾಡಿದ ಐದು ಲಕ್ಷಕ್ಕೂ ಹೆಚ್ಚು ಸಾಲ ತೀರಿಸುವುದು ಸಾಧ್ಯವಿಲ್ಲ ಎಂದು ನಿರ್ಧರಿಸಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗೆ ನಿಲ್ಲದ ರೈತರ ಸಾವು ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ.
ಇಂಥ ಕಠಿಣ ಸ್ಥಿತಿಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಪ್ರವಾಸವನ್ನು ಕಲಬುರಗಿಯಿಂದ ಮಂಗಳವಾರ ಆರಂಭಿಸಲಿದ್ದಾರೆ. ಮಂಗಳವಾರ ಕಲಬುರಗಿ, ಬೀದರ್ ಮತ್ತು ಬುಧವಾರ ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಕಲೆ ಹಾಕಲಿದ್ದಾರೆ.
ರೈತರ ಸಾವು ಸರ್ಕಾರಕ್ಕೂ ಕಪ್ಪು ಚುಕ್ಕೆ ಇದ್ದಂತೆ. ಹೀಗಾಗಿ ಕೃಷಿ ಸಚಿವರ ಭೇಟಿ ಕಾಟಾಚಾರದ್ದಾದರೆ ಲಾಭವೇನೂ ಇಲ್ಲ. ಅವರು ನಡೆಸುವ ಸಭೆ ಅವಧಿ ಸಹ ಕೇವಲ ಒಂದರಿಂದ ಎರಡು ಗಂಟೆ. ಕೃಷಿ ಅಧಿಕಾರಿಗಳು ನೀಡುವ ಅಂಕಿ-ಅಂಶ ಪರಿಗಣಿಸುವುದಿದ್ದರೆ ಸಭೆಗೆ ಮಹತ್ವ ಇಲ್ಲದಂತಾಗುತ್ತದೆ. ಈ ನಿಟ್ಟಿನಲ್ಲಿ ಪಾಟೀಲ್ ಯೋಚಿಸಿ ರೈತರಲ್ಲಿ ಧೈರ್ಯ ತುಂಬುವ ಮತ್ತು ಬೆಳೆಗೆ ಮಾರುಕಟ್ಟೆ ವ್ಯವಸ್ಥೆ, ಸೂಕ್ತ ಬೆಲೆಯಂಥ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ.

ರೈತರಿಗೆ ಸೂಕ್ತ ಪರಿಹಾರ ಕೊಡುವಂಥ ನಿರ್ಧಾರ ಕೈಗೊಳ್ಳುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ. ಹಾಪ್ಕಾಮ್ಸ್ ಮೂಲಕ ಹಣ್ಣು ಮತ್ತು ತರಕಾರಿ ಮಾರಲು ವ್ಯವಸ್ಥೆ ಮಾಡುವುದಾಗಿ ಹೇಳುತ್ತಿದೆ. ರಾಜ್ಯದ ಎಲ್ಲ ಕಡೆ ಅಗತ್ಯವಿರುವಷ್ಟು ಹಾಪ್ಕಾಮ್ಸ್ಗಳು ಎಲ್ಲಿವೆ? ರೈತರಿಗೆ ಗೋಪುರ ತೋರಿಸದೆ ಪರಿಹಾರ ಬೇಕು. ಸುಮಾರು 10 ಲಕ್ಷ ಕ್ವಿಂಟಾಲ್ ತೊಗರಿ ಖರೀದಿಯಾಗಿಲ್ಲ. ಪ್ರತಿ ರೈತನಿಂದ 20 ಕ್ವಿಂಟಾಲ್ ಖರೀದಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದರೂ ಜಾರಿಯಾಗಿಲ್ಲ. ಸುಳ್ಳು ಭರವಸೆ ನೀಡುತ್ತ ಹೋದರೆ ತನಗೆ ಸಾವೇ ಗತಿ ಎಂದು ರೈತ ನಿರ್ಧರಿಸುತ್ತಾನೆ.
| ಮಾರುತಿ ಮಾನ್ಪಡೆ
ಉಪಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ