ಎಚ್.ಡಿ.ಕೋಟೆ: ತಾಲೂಕಿನಲ್ಲಿ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ತಹಸೀಲ್ದಾರ್ ಸಣ್ಣರಾಮಪ್ಪ ಎಚ್ಚರಿಸಿದರು.
ಪಟ್ಟಣದ ತಾಲೂಕು ಆಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರೈತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ತಾವು ಬಾರದೆ ತಮ್ಮ ಅಧೀನದ ಸಿಬ್ಬಂದಿಯನ್ನು ಕಳುಹಿಸುವುದರಿಂದ ರೈತರ ಸಮಸ್ಯೆಗಳನ್ನು ಸಮರ್ಪಕವಾಗಿ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮುಂದಿನ ಸಭೆಗಳಲ್ಲಿ ಇಲಾಖಾ ಅಧಿಕಾರಿಗಳು ತಪ್ಪದೆ ಸಭೆಗೆ ಹಾಜರಾಗಬೇಕು. ತಪಿದಲ್ಲಿ ಅವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುತ್ತದೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮಹಾದೇವ ನಾಯಕ ಮಾತನಾಡಿ, ರೈತರ ಸಮಸ್ಯೆಯನ್ನು ಅಧಿಕಾರಿ ವರ್ಗ ಮನಗಾಣಬೇಕು. ರೈತರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಅಲ್ಲದೆ ಅಂಗಡಿಗಳಲ್ಲಿ ಬಿತ್ತನೆಬೀಜ, ರಸಗೊಬ್ಬರ ಸೇರಿದಂತೆ ಇನ್ನಿತರ ಪದಾರ್ಥಗಳ ಸ್ಟಾಕ್‌ಗಳನ್ನು ನಾಮಫಲಕದಲ್ಲಿ ನಮೂದಿಸುವುದಿಲ್ಲ. ಇದರ ಬಗ್ಗೆ ಈ ಹಿಂದಿನ ಸಭೆಯಲ್ಲಿ ತಿಳಿಸಿದರೂ ಕೃಷಿ ಇಲಾಖೆ ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು.
ಕೃಷಿ ಇಲಾಖೆ ಅಧಿಕಾರಿ ರಂಗಸ್ವಾಮಿ ಪ್ರತಿಕ್ರಿಯಿಸಿ, ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ತೃಪ್ತರಾಗದ ರೈತರು, ನೀವು ಅಂಗಡಿಗಳಿಗೆ ಭೇಟಿ ನೀಡದರೆ ಸಾಲದು, ಗೊಬ್ಬರ ಅಂಗಡಿಗಳಲ್ಲಿ ಎಷ್ಟು ಸ್ಟಾಕ್ ಇದೆ ಎಂಬುದನ್ನು ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ರಂಗಸ್ವಾಮಿ, ನಾನು ಈಗಾಗಲೇ ಅಂಗಡಿಗಳಿಗೆ ಭೇಟಿ ನೀಡಿ, ನಿಯಮ ಉಲ್ಲಂಘಿಸಿದವರಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದೇನೆ. ಅಂತಿಮ ನೋಟಿಸ್ ಜಾರಿ ಮಾಡಿ, ನಂತರ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಕಳೆದ ತಿಂಗಳು ಅಂಗಡಿ ಮಾಲೀಕರ ಸಭೆ ಕರೆದು ರೈತರಿಗೆ ತೊಂದರೆ ಆಗದಂತೆ ಬಿತ್ತನೆಬೀಜ, ರಸಗೊಬ್ಬರ ವಿತರಿಸಬೇಕು ಎಂದು ಸೂಚಿಸಲಾಗಿದೆ. ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದ ನಾನು ಶನಿವಾರ, ಭಾನುವಾರ ರಜೆ ಎಂಬುದನ್ನು ಲೆಕ್ಕಿಸದೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ಮಾಹಿತಿ ನೀಡಿದರು. ತಾಲೂಕಿನಲ್ಲಿ 480 ಗ್ರಾಮಗಳಿದ್ದು, ಕೃಷಿ ಇಲಾಖೆಯಲ್ಲಿ ಇರುವುದು ಇಬ್ಬರು ಅಧಿಕಾರಿಗಳು ಮಾತ್ರ. ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕಾಲಕಾಲಕ್ಕೆ ಮಳೆ ಆಗದೆ ಇಂದು ರೈತರ ಸ್ಥಿತಿ ಅತಂತ್ರರಾಗಿದ್ದಾರೆ. ಅಧಿಕಾರಿಗಳು ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಡ್ಡಾಯವಾಗಿ ತಲುಪಿಸುವ ಕೆಲಸ ಮಾಡಬೇಕು ಎಂದು ರೈತ ಮಹಾದೇವ ನಾಯಕ, ಒತ್ತಾಯಿಸಿದರೆ, ರೈತ ಮುಖಂಡ ಜಕ್ಕಹಳ್ಳಿ ರವಿಕುಮಾರ್ ರೈತರ ಗದ್ದೆಗಳಿಗೆ ಜಲಾಶಯದಿಂದ ನೀರು ಬಿಡುವ ಮುಂಚೆ ಬಿತ್ತನೆ ಬೀಜ ವಿತರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಬ್ ರಿಜಿಸ್ಟಾರ್ ಕಚೇರಿಯನ್ನು ಖಾಸಗಿ ಕಟ್ಟಡದಿಂದ ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಮಾಡಲು ಹಿಂದಿನ ಸಭೆಯಲ್ಲಿ ತಿಳಿಸಿ ಆರು ತಿಂಗಳು ಕಳೆದರು ಕೂಡ ಖಾಸಗಿ ವ್ಯಕ್ತಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಆಗಸ್ಟ್ 15ರೊಳಗೆ ಕಚೇರಿ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ ಎಂದು ತಹಸೀಲ್ದಾರ್ ಇದೇ ವೇಳೆ ಮಾಹಿತಿ ನೀಡಿದರು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಎಇಒ ರಂಗಸ್ವಾಮಿ, ಎಇಇ ಜನಾರ್ಧನ್, ರೈತ ಸಂಘದ ಮುಖಂಡರಾದ ಬಸವರಾಜು, ಹೋಟೆಲ್ ಪ್ರಸಾದ್, ಮಿಲ್ ನಾಗರಾಜು, ಸಣ್ಣಕುಮಾರ್, ಕೃಷ್ಣ, ಸುಗುಣ, ರಾಮಸ್ವಾಮಿ ಇದ್ದರು.