ಜಿಲ್ಲೆ

ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ; ಎಂ.ಟಿ. ಕೃಷ್ಣೇಗೌಡ


ಅರಕಲಗೂಡು: ಆಳುವ ವರ್ಗದವರ ಮಲತಾಯಿ ಧೋರಣೆಗೆ ಸಿಲುಕಿ ಅರೆಮಲೆನಾಡು ಪ್ರದೇಶವಾದ ಮಲ್ಲಿಪಟ್ಟಣ ಹೋಬಳಿ ಅಭಿವೃದ್ಧಿ ವಿಚಾರದಲ್ಲಿ ತೀರ ಹಿಂದುಳಿದಿದ್ದು ಈ ಭಾಗದ ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ಅಸಮಧಾನ ವ್ಯಕ್ತಪಡಿಸಿದರು.


ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಆಲದಹಳ್ಳಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕ ಮಳೆ ಬೀಳುವ ಕೊಡಗಿನ ಗಡಿ ಹಂಚಿಕೊಂಡಿರುವ ಹೋಬಳಿಯ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳ ಕೊರತೆ ನೀಗಿಸಿಲ್ಲ. ಜನಪ್ರತಿನಿಧಿಗಳ ತಾರತಮ್ಯ ಧೋರಣೆಗೆ ಒಳಗಾಗಿ ಅಭಿವೃದ್ಧಿ ಕಾರ್ಯಗಳಿಂದ ದೂರವುಳಿದಿದೆ. ಮುಂದಿನ ಚುನಾವಣೆಯಲ್ಲಿ ಈ ಭಾಗದ ಜನರು ಬೆಂಬಲಿಸಿ ಹೋಬಳಿಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.


ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಮಾತನಾಡಿ, ಜನ ಪ್ರನಿಧಿಗಳು ಈ ಭಾಗದ ರೈತರ ಸಮಸ್ಯೆಗಳಿಗೆ ಕಿಂಚಿತ್ತೂ ಸ್ಪಂದಿಸಿದ ಉದಾಹರಣೆ ಇಲ್ಲ. ಕೊಡಗಿನ ಗಡಿ ಭಾಗದ ಪ್ರಮುಖ ಹೋಬಳಿ ಕೇಂದ್ರವಾದರೂ ಸುಸಜ್ಜಿತವಾದ ಆಸ್ಪತ್ರೆ ಕಟ್ಟಡವಿಲ್ಲ. ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ತಾರತಮ್ಯ ಮಾಡಲಾಗುತ್ತಿದೆ. ಪ್ರತಿ ವರ್ಷವೂ ಕಾಡಾನೆಗಳ ಕಾಟ ವಿಪರೀತವಾಗಿದ್ದು ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ನಾಶವಾಗುತ್ತಿವೆ. ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕುತ್ತಿಲ್ಲ. ಆನೆಗಳ ದಾಳಿಗೆ ತುತ್ತಾಗಿ ಬೆಳೆ ನಷ್ಟವಾದರೂ ಜನಪ್ರತಿನಿಧಿಗಳು ಕನಿಷ್ಟ ಸ್ಥಳಕ್ಕೆ ಭೇಟಿ ನೀಡಿ ರೈತರ ಸಂಕಷ್ಟ ಆಲಿಸುತ್ತಿಲ್ಲ. ಬೆಳೆ ಕಳೆದುಕೊಂಡ ಬಹಳಷ್ಟು ರೈತರಿಗೆ ಬಿಡಿಗಾಸಿನ ಪರಿಹಾರ ಸಿಗದೆ ಪರಿತಪಿಸುವ ಸ್ಥಿತಿ ಇದೆ. ವಿಧಾನಸಭೆ ಅಧಿವೇಶನದಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕ್ಷೇತ್ರದ ಜನಪ್ರತಿನನಿಧಿ ಇಷ್ಟು ವರ್ಷಗಳವರೆಗೂ ಈ ಭಾಗದ ರೈತರ ಪರವಾಗಿ ಧ್ವನಿ ಎತ್ತುವ ಸೌಜನ್ಯ ಕೂಡ ತೋರುತ್ತಿಲ್ಲ. ಈ ಬಗ್ಗೆ ಜನತೆ ಆಳವಾದ ಚಿಂತನೆ ನಡೆಸಿ ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆ ಮಾಡಲು ಕೃಷ್ಣೇಗೌಡರನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.


ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಮುಖಂಡ ಜಮೀರ್ ಪಾಷಾ ಮಾತನಾಡಿ, ಮಲ್ಲಿಪಟ್ಟಣ ಹೋಬಳಿಗೆ ಜನಪ್ರತಿನಿಧಿಗಳ ಕೊಡುಗೆ ಶೂನ್ಯವಾಗಿದ್ದು ಅಭಿವೃದ್ಧಿಯಿಂದ ವಂಚಿತವಾಗಿದೆ. ಈ ಭಾಗದ ಜನರ ಪಾಲಿಗೆ ಕೃಷ್ಣೇಗೌಡ ಅವರು ಮಾಣಿಕ್ಯ ಇದ್ದಂತೆ, ಚುನಾವಣೆಯಲ್ಲಿ ಇವರನ್ನು ಆಯ್ಕೆ ಮಾಡಬೇಕು ಎಂದಾಗ ಸಭೆಯಲ್ಲಿದ್ದ ಜನರು ಕರತಾಡನದಿಂದ ಚಪ್ಪಾಳಿ ತಟ್ಟಿ ಬೆಂಬಲ ವ್ಯಕ್ತಪಡಿಸಿದರು.


ಮುಖಂಡರಾದ ಮಾಗೋಡು ಗಿರೀಶ್, ಕೇಶವ್, ಗೌತಮ್, ಕಳ್ಳಿ ಮುದ್ದನಹಳ್ಳಿ ಲೋಕೇಶ್, ರಾಮೇಗೌಡ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ದೇವರಾಜೇಗೌಡ, ಯುವ ಮುಖಂಡರಾದ ಶಿರೀನ್ ರಂಗಸ್ವಾಮಿ, ಪರ್ವತೇಗೌಡ, ಕಾಫಿ ಬೆಳೆಗಾರ ಲಿಂಗಪ್ಪ, ಚಂದ್ರಣ್ಣ, ವಕೀಲ ಹೇಮಂತಕುಮಾರ್, ಬಾಬು ಮುಂತಾದವರು ಹಾಜರಿದ್ದರು. ಮಲ್ಲಿಪಟ್ಟಣ ಹಾಗೂ ಆಲದಹಳ್ಳಿ ಗ್ರಾಪಂ ಪೌರ ಕಾರ್ಮಿಕರಿಗೆ ಉಚಿತವಾಗಿ ಸಮವಸ್ತ್ರಗಳನ್ನು ವಿತರಿಸಲಾಯಿತು.