ಜಿಲ್ಲೆ

ರೈತರ ಮೊಗದಲಿ ಸಂತಸ ಮೂಡಿಸಿ

ಸಿರಿಗೆರೆ: ತಮ್ಮ ಕ್ಷೇತ್ರದಲ್ಲಿ ಗೆಲುವು ಕಂಡಿರುವ ನೀವುಗಳು ರೈತರ ಮೊಗದಲ್ಲಿ ಸಂತಸ ಮೂಡಿಸಲು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನೂತನ ಶಾಸಕರುಗಳಿಗೆ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

ತರಳಬಾಳು ಮಠಕ್ಕೆ ಶ್ರೀಗಳ ಆಶೀರ್ವಾದ ಪಡೆಯಲು ಪ್ರತ್ಯೇಕವಾಗಿ ಈಚೆಗೆ ಭೇಟಿ ನೀಡಿದ್ದ ಜಗಳೂರು-ದೇವೇಂದ್ರಪ್ಪ, ಹರಿಹರ-ಬಿ.ಪಿ.ಹರೀಶ್, ಬೇಲೂರು ಕ್ಷೇತ್ರದ ವಿಜೇತ ಅಭ್ಯರ್ಥಿ ಎಚ್.ಸುರೇಶ್ ಅವರಿಗೆ ಶ್ರೀಗಳು ಕೆಲ ಸಲಹೆ-ಸೂಚನೆಗಳನ್ನು ನೀಡಿದರು.

ಹರಿಹರದ ಬಿ.ಪಿ.ಹರೀಶ್ ಮಾತನಾಡಿ, ಮಲೇಬೆನ್ನೂರು ಹೋಬಳಿಯ ಅನೇಕ ಗ್ರಾಮಗಳ ನೂರಾರು ಎಕರೆಗೆ ನೀರು ಹರಿಸುವ ಬೈರನಪಾದ ಏತನೀರಾವರಿ ಯೋಜನೆ ಜಾರಿಗೊಳಿಸಲು ತಮ್ಮ ನೇತೃತ್ವದ ಮಾರ್ಗದರ್ಶನ ಅಗತ್ಯ ಎಂದು ಶ್ರೀಗಳಲ್ಲಿ ಮನವಿ ಮಾಡಿದರು.

ಮಲೇಬೆನ್ನೂರು ಸಮೀಪದ ಗೋವಿನಹಾಳು ಬಳಿಯ ತುಂಗಭದ್ರಾ ನದಿಯಲ್ಲಿ ಭೈರನಪಾದ ಸ್ಥಳವಿದ್ದು, ಆ ನದಿಯಿಂದ ನೀರು ಭದ್ರಾಕಾಲುವೆಗೆ ಹರಿಸಿ ಕೊನೆಯ ಭಾಗಕ್ಕೆ ಹರಿಸಿದರೆ ನೀರಿನ ಬವಣೆ ತಪ್ಪಲಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ತಾವು ಒತ್ತಡ ತರಬೇಕು ಎಂದು ಕೋರಿದರು.

ಜಗಳೂರು ಏತ ನೀರಾವರಿ ಯೋಜನೆ: 2018ರ ಜಗಳೂರು ತರಳಬಾಳು ಹುಣ್ಣಿಮೆ ಮಹೋತ್ಸವದ ನಿಮಿತ್ತ ಸಾಕಾರಗೊಂಡು ನೀರಾವರಿ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಪೂರ್ಣಗೊಳಿಸಲು ಹೆಚ್ಚಿನ ಗಮನ ನೀಡಬೇಕು. ಈ ಯೋಜನೆ ವ್ಯಾಪ್ತಿಯ ಜಗಳೂರು-ಹರಪನಹಳ್ಳಿ ತಾಲೂಕಿನ 57 ಕೆರೆಗಳಿಗೆ ಈ ವರ್ಷ ನೀರು ತುಂಬಿಸಿ ರೈತರ ಮೊಗದಲಿ ಸಂತಸ ಮೂಡಿಸುವ ಕೆಲಸ ಆಗಬೇಕು ಎಂದು ದೇವೇಂದ್ರಪ್ಪಗೆ ಶ್ರೀಗಳು ಸೂಚಿಸಿದರು.

ರಣಘಟ್ಟ ಏತ ನೀರಾವರಿ: ಹಳೇಬೀಡು, ಜಾವಗಲ್, ಮಾದಿಹಳ್ಳಿ ಹೋಬಳಿಗಳ ವ್ಯಾಪ್ತಿಯ ಕೆರೆಗಳಿಗೆ ಯಗಚಿ ನದಿಯಿಂದ ರಣಘಟ್ಟ ಯೋಜನೆಯ ಮುಖಾಂತರ ನೀರು ತುಂಬಿಸುವ 128 ಕೋಟಿ ರೂ. ಗಳ ರಣಘಟ್ಟ ನೀರಾವರಿ ಯೋಜನೆಯ ಟೆಂಡರ್ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳು ಸಂಪೂರ್ಣಗೊಂಡಿದ್ದು, ಬೇಲೂರು ತಾಲೂಕಿನ ದ್ವಾರಸಮುದ್ರ ಮತ್ತು 6 ಕೆರೆಗಳನ್ನು ಹಾಗೂ ಚಿಕ್ಕಮಗಳೂರಿನ ಬೆಳವಾಡಿ ಕರೆಯನ್ನು ರಣಘಟ್ಟ ಪಿಕಪ್ ವಿಯರ್ ತಿರುವಿನಿಂದ ಕೆರೆತುಂಬಿಸುವ ಕಾಮಗಾರಿಗೆ ನೆರವಾಗುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಶ್ರೀಗಳಲ್ಲಿ ಬೇಲೂರು ಶಾಸಕ ಸುರೇಶ್ ಮನವಿ ಮಾಡಿಕೊಂಡರು.