ಗೋಣಿಕೊಪ್ಪ: ರೈತರಿಗೆ ಪೂರಕವಾದ ಮಾರ್ಗದರ್ಶನ ನೀಡಲು ಗ್ರಾಮ ಮಟ್ಟದಲ್ಲಿ ಕೃಷಿ ಸಖಿ ಯೋಜನೆ ರೂಪಿಸಲಾಗಿದ್ದು, ರೈತರು ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪ್ರಯೋಜನವಾಗಲಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನ ಶೇಕ್ ತಿಳಿಸಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗ್ರಾಪಂ ಮಟ್ಟದ ಕೃಷಿ ಸಖಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ಥಳೀಯ ಕೃಷಿ ಪದ್ಧತಿಯಲ್ಲಿನ ಸಮಸ್ಯೆಗಳನ್ನ ಅರ್ಥೈಸಿಕೊಂಡು ಯೋಜನೆಯನ್ನು ಜಾರಿಗೊಳಿಸಲಾಗಿದೆ. ತಾಂತ್ರಿಕ ಪದ್ಧತಿಗಳನ್ನು ತಿಳಿಸಲು ಮತ್ತು ಕೃಷಿಯ ಮೌಲ್ಯವರ್ಧನೆಗೆ ಪೂರಕವಾಗುವ ರೀತಿಯಲ್ಲಿ ಕೃಷಿ ಸಖಿ ಉಪಯುಕ್ತವಾಗಿದೆ. ಸರ್ಕಾರದ ಸೇವೆಗಳನ್ನು ರೈತರಿಗೆ ತಲುಪಿಸಲು, ಸಣ್ಣ ಮತ್ತು ಅತಿ ಸಣ್ಣ ಮಹಿಳಾ ರೈತ ಕುಟುಂಬಗಳಿಗೆ ಅಗತ್ಯವಿರುವ ವಿಸ್ತರಣಾ ಸೇವೆ, ತಾಂತ್ರಿಕ ಜ್ಞಾನ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಜೀವನೋಪಾಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿಸಖಿ ಆಯ್ಕೆ ನಡೆಸಲಾಗುವುದು ಎಂದು ತಿಳಿಸಿದರು.
ಕೆವಿಕೆ ಮುಖ್ಯಸ್ಥ ಕಾಡ್ಯಮಾಡ ಎ.ದೇವಯ್ಯ ಮಾತನಾಡಿ, ಕೃಷಿ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮತ್ತು ರೈತ ಮಹಿಳೆಯರಲ್ಲಿ ತಾಂತ್ರಿಕ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಸಖಿ ಜಾರಿಗೊಳಿಸಲಾಗಿದೆ. ತಾಂತ್ರಿಕ ತರಬೇತಿ ನೀಡುವ ಮೂಲಕ ಹೊಸತನದ ಕೃಷಿ ಪ್ರಯೋಗಕ್ಕೆ ಅಣಿಗೊಳಿಸುವ ಕಾರ್ಯತಂತ್ರವಾಗಿದೆ. ಇದರಿಂದ ಶೇ. 80ರಷ್ಟು ಕೃಷಿ ಅಭಿವೃದ್ಧಿ ಚಟುವಟಿಕೆಗಳು ನಡೆಯುವ ನಿರೀಕ್ಷೆ ಇದೆ ಎಂದರು.
ಜಿಲ್ಲಾ ಕಾರ್ಯಕ್ರಮ ಯೋಜನಾ ವ್ಯವಸ್ಥಾಪಕ ಪಿ.ಕುಮಾರ್ ಮಾತನಾಡಿ, ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ರೈತರು ಆರ್ಥಿಕವಾಗಿ ಸಬಲರಾಗಬಹುದು. ರೈತರ ಆತ್ಮಹತ್ಯೆ ಪ್ರಕರಣ ತಪ್ಪಿಸಬಹುದಾಗಿದೆ. ಸಖಿ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಗ್ರಾಮೀಣ ಭಾಗದಲ್ಲಿನ ಕೃಷಿ ಚಟುವಟಿಕೆಗಳನ್ನ ಅಭಿವೃದ್ಧಿಯ ಪಥಕ್ಕೆ ಏರಿಸಲು ಸಾಧ್ಯವಾಗಬಲ್ಲದು ಎಂದರು.
ಕೃಷಿ ಇಲಾಖೆ ಅಧಿಕಾರಿ ಡಾ.ವೆಂಕಟೇಶ್ ಆನ್‌ಲೈನ್ ಮೂಲಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಂಜೀವಿನಿ ಒಕ್ಕೂಟದ ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ್, ಕೃಷಿ ಸಖಿ ತರಬೇತಿ ಕಾರ್ಯಾಗಾರದ ಸಂಚಾಲಕ ಡಾ.ಪ್ರಭಾಕರ್, ಸಸ್ಯ ಸಂರಕ್ಷಣೆ ತಜ್ಞ ಡಾ.ವೀರೇಂದ್ರಕುಮಾರ್ ಇದ್ದರು.