ಜಿಲ್ಲೆ

ರೈತರ ಮನೆಗೆ ತಲುಪಿದ ದಾಖಲೆ; ಶೇ.100 ಗುರಿ ಸಾಧಿಸಿದ ಜಿಲ್ಲಾಡಳಿತ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಕಂದಾಯ ದಾಖಲೆ ಮನೆ ಬಾಗಿಲಿಗೆ ವಿನೂತನ ಕಾರ್ಯಕ್ರಮದಡಿ ಜಿಲ್ಲಾಡಳಿತವು ನಿಗದಿತ ಶೇ.100 ಗುರಿ ಸಾಧಿಸಿದೆ. ಬರೋಬ್ಬರಿ 14,27,092 ಕಂದಾಯ ದಾಖಲೆಗಳ ವಿತರಣೆ ಗುರಿ ಹೊಂದಲಾಗಿತ್ತು. ಈ ಪೈಕಿ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಿ, ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಗುಂಗೀರ್ಲಹಳ್ಳಿಯಲ್ಲಿ ಮಾ.12ರಂದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಆ ಒಂದೇ ದಿನ ಆಯಾ ಕ್ಷೇತ್ರದ ಶಾಸಕರು, ತಹಸೀಲ್ದಾರ್, ಇಒ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸೇರಿ ಜಿಲ್ಲೆಯಲ್ಲಿ ಶೇ.70 ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ಬಳಿಕ ಉಳಿಕೆ ಶೇ.30 ದಾಖಲೆಗಳನ್ನು ವಿತರಿಸಲಾಗಿದೆ. ಇದರೊಂದಿಗೆ ನೂತನ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಂತಾಗಿದೆ.

ನಾಡ ಕಚೇರಿಯಲ್ಲಿ ವಿತರಣೆ: ಜಿಲ್ಲೆಯ ನಾಡಕಚೇರಿಯಲ್ಲಿ ಮಾ.21ರಿಂದ ಮಾ.26 ರವರೆಗೆ ನಾಡಕಚೇರಿಯಲ್ಲಿ ಕಂದಾಯ ದಾಖಲೆ, ಮನೆ ಬಾಗಿಲಿಗೆ ಯೋಜನೆಯಡಿ ದಾಖಲೆಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಅನಿರೀಕ್ಷಿತ ಕಾರಣಗಳಿಂದ ಯಾವುದಾದರೂ ರೈತರಿಗೆ ದಾಖಲೆಗಳು ತಲುಪದಿದ್ದಲ್ಲಿ ರೈತರು ಆಯಾ ವ್ಯಾಪ್ತಿಯ ನಾಡಕಚೇರಿಯಲ್ಲಿ ಉಚಿತವಾಗಿ ಕಂದಾಯ ದಾಖಲೆ ಪಡೆಯಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ದಾಖಲೆ ವಿತರಣೆಗೆ ಶ್ರಮ: ಪ್ರಸ್ತುತ ವಿತರಣೆಯ 14,27,092 ದಾಖಲೆಗಳ ಪೈಕಿ 8,50,465 ಪಹಣಿ, 78,976 ಅಟ್ಲಾಸ್, 2,14,483 ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 2,83,168 ಇತರ ದಾಖಲೆಗಳು ಸೇರಿವೆ. ದಾಖಲೆಗಳನ್ನು ಭೂಮಿ, ಮೋಜಣಿ ಹಾಗೂ ಇ-ಕ್ಷಣ ತಂತ್ರಾಂಶಗಳಿಂದ ಡೌನ್‌ಲೋಡ್ ಮಾಡಿ, ಮುದ್ರಿತಗೊಂಡ ಪ್ರತಿಗಳ ಲಕೋಟೆಯನ್ನು ವಿತರಿಸಲಾಗಿದೆ. ಇದಕ್ಕೆ ಅಧಿಕಾರಿಗಳು ಮಾ.12, 13ರಂದು ಎರಡೂ ದಿನ ಸರ್ಕಾರಿ ರಜಾ ದಿನಗಳನ್ನು ಲೆಕ್ಕಿಸದೆ ಕಂದಾಯ ದಾಖಲೆಗಳನ್ನು ಉಚಿತವಾಗಿ ವಿತರಣೆ ಮೂಲಕ ನಿಗದಿತ ಗುರಿ ಸಾಧಿಸಿದ್ದಾರೆ.

ಜಿಲ್ಲೆಯಲ್ಲಿ ಕಂದಾಯ ಇಲಾಖೆ ಯೋಜನೆಯಡಿ 1,47,168 ಫಲಾನುಭವಿಗಳಿಗೆ ದಾಖಲೆಗಳನ್ನು ವಿತರಿಸಿ, ನಿಗದಿತ ಶೇ.100 ಪ್ರಗತಿ ಸಾಧಿಸಲಾಗಿದೆ. ಅನಿವಾರ್ಯ ಕಾರಣದಿಂದ ಯಾವುದಾದರೂ ರೈತರು ದಾಖಲೆ ಸ್ವೀಕರಿಸದಿದ್ದಲ್ಲಿ ಮಾ.21ರಿಂದ 26 ರವರೆಗೆ ನಾಡಕಚೇರಿಯಲ್ಲಿ ಉಚಿತವಾಗಿ ಕಂದಾಯ ಪಡೆದುಕೊಳ್ಳಬೇಕು. ಆರ್.ಲತಾ, ಜಿಲ್ಲಾಧಿಕಾರಿ ****** ಕಂದಾಯ ದಾಖಲೆ, ಮನೆಯ ಬಾಗಿಲಿನ ಯೋಜನೆಯ ಮೂಲಕ ನಿರೀಕ್ಷೆಯ ದಾಖಲೆಗಳು ಸುಲಭವಾಗಿ ಸಿಕ್ಕಿರುವುದು ಖುಷಿಯ ವಿಚಾರ. ರತ್ನಮ್ಮ, ಫಲಾನುಭವಿ