ಜಿಲ್ಲೆ

ರೈತರ ಮನವೊಲಿಕೆ ಕೆಲಸಕ್ಕೆ ಚಾಲನೆ

ಶಾಸಕ ಸಿ.ಬಿ.ಸುರೇಶ್​ಬಾಬು ಹೇಳಿಕೆ, ಗ್ಯಾರೇಹಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ಚಿಕ್ಕನಾಯಕನಹಳ್ಳಿ: ಹದಿನೈದು ವರ್ಷಗಳಿಂದ ನಡೆಯುತ್ತಿರುವ ಹೇಮಾವತಿ ನಾಲಾ ಕಾಮಗಾರಿಗೆ ಅಡ್ಡಿಯಾಗಿದ್ದ ಭೂಸ್ವಾಧಿನ ಪ್ರಕ್ರಿಯೆಯಲ್ಲಿ ಕೈ ಬಿಟ್ಟ ಪ್ರಕರಣಗಳಲ್ಲಿ ಗ್ಯಾರೇಹಳ್ಳಿ ಭಾಗದ ರೈತರ ಮನವೊಲಿಸಿದ್ದು, ಕಾಮಗಾರಿಗೆ ಅಮಕಾಶ ಕಲ್ಪಿಸಿದ್ದಾರೆ ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.

ತಾಲೂಕಿನ 26 ಕೆರೆಗಳಿಗೆ ನೀರು ಹರಿಸುವ ಹೇಮಾವತಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಸ್ಥಳಕ್ಕೆ ಕಾವೇರಿ ನಿರಾವರಿ ನಿಗಮದ ಇಂಜಿನಿಯರ್​ಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ತಾಲೂಕಿನ ಹೇಮಾವತಿ ಯೋಜನೆಯಡಿ ಈಗಾಗಲೇ ಕಾಮಗಾರಿ ನಡೆದಿರುವ ಶೆಟ್ಟಿಕೆರೆ ಭಾಗದ ಚಾನಲ್​ನಲ್ಲಿ ನೀರು ಹರಿಯಲು ತೊಂದರೆಯಾಗಿದ್ದ ಹೂಳನ್ನು ತೆಗೆಸುವ ಕೆಲಸ ಮಾಡಲಾಗುತ್ತಿದೆ. ಸೇತುವೆಗಳ ಭಾಗದಲ್ಲಿ ಹೂಳು ತುಂಬಿ ನೀರು ಹರಿಯಲು ತೊಂದರೆಯಾಗುತ್ತಿತ್ತು. ಇದನ್ನು 28 ಲಕ್ಷ ರೂ. ವೆಚ್ಚದಲ್ಲಿ ತೆಗೆಸುವ ಕೆಲಸ ಮಾಡಲಾಗುತ್ತಿದೆ. ಕಾಮಾಗಾರಿ ಪೂರ್ಣಗೊಂಡರೆ ಈ ಬಾರಿ ಪೆಮ್ಮಲದೇವರಹಳ್ಳಿ ಕೆರೆ, ಶೆಟ್ಟಿಕೆರೆ ಮಾರ್ಗವಾಗಿ ಹುಳಿಯಾರು ಕೆರೆಯನ್ನು ಹೇಮಾವತಿ ತಲುಪುವುದು ನಿಶ್ಚಿತ ಎಂದರು. ಈ ಸಮಸ್ಯೆಗೆ ಸೂಕ್ತ ಹಾಗೂ ಶಾಶ್ವತ ಪರಿಹಾರವೆಂದರೆ ಕಟ್​ ಆ್ಯಂಡ್​ ಕವರ್​ ಮೂಲಕ ನೀರನ್ನು ಹರಿಸಬೇಕು. ಇದಕ್ಕೆ 150 ಕೋಟಿ ರೂ. ಅನುದಾನ ಅಗತ್ಯವಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಬಗ್ಗೆ ಜಿಲ್ಲೆಯ ಸಂಸದರು ಈ ಬಗ್ಗೆ ಮಾಹಿತಿ ಕೇಳಿದ್ದು, ಅವರಿಗೆ ವರದಿ ನೀಡಲಾಗುವುದು ಎಂದರು.

ಇದರೊಂದಿಗೆ ಚಾನಲ್​ ಕಾಮಗಾರಿ ನಿಧಾನವಾಗಲು ಕಾರಣವಾಗಿದ್ದ ಭೂಸ್ವಾಧಿನ ಪ್ರಕ್ರಿಯೆ ಕೈ ಬಿಟ್ಟ ಪ್ರಕರಣಗಳನ್ನು ಕ್ರಮವಹಿಸಿ ಅವಾರ್ಡ್​ ನೀಡುವಂತೆ ಹಾಗೂ ಪರಿಹಾರದ ಹಣ ನೀಡುವವರೆಗೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ತಡೆದಿದ್ದಂತಹ ರೈತರ ಮನೆಗಳಿಗೆ ಭೇಟಿ ನೀಡಿ ಅವರನ್ನು ಮನವೊಲಿಸಲಾಗಿದೆ. ಕಾಮಗಾರಿ ಮುಂದುವರಿಸಲು ತಮ್ಮ ಅಭ್ಯಂತರವಿಲ್ಲ, ನಮಗೆ ಅವಾರ್ಡ್​ ಹಾಗೂ ಪರಿಹಾರದ ಹಣ ನೀಡುವಂತೆ ತಿಳಿಸಿದ್ದಾರೆ. ಯೋಜನೆಯಲ್ಲಿ 15 ಕೋಟಿ ಹಣವಿದ್ದು ಸರಿಯಾದ ದಾಖಲೆ ನೀಡಿರುವ 12 ಜನರಿಗೆ ಪರಿಹಾರದ ಹಣ 3.5 ಕೋಟಿ ರೂ. ನೀಡಲಾಗುತ್ತಿದ್ದು, ಉಳಿದವರಿಗೂ ನೀಡಲಾಗುವುದು. ಮುಂದಿನ 2026ರ ಜೂನ್​ ವೇಳೆ ಈ ಹೇಮಾವತಿ

ನಾಲಾ ಕಾಮಗಾರಿ ಪೂರ್ಣಗೊಳಿಸಿ 26 ಕೆರೆಗಳಿಗೂ ನೀರು ಹರಿಸುವುದಾಗಿ ತಿಳಿಸಿದರು.

ಕಾವೇರಿ ನೀರಾವರಿ ನಿಗಮದ ಸೂಪರಿಡೆಂಟ್​ ಇಂಜಿನಿಯರ್​ ಜಿ.ಸುವರ್ಣ ಮಾತನಾಡಿ, ಈ ಕಾಮಗಾರಿಯು ಇಷ್ಟೋಂದು ನಿಧಾನವಾಗಲು ಕಾರಣವೇ ಭೂಸ್ವಾಧಿನ ಪ್ರಕ್ರಿಯೆಯಲ್ಲಿ ಕೈ ಬಿಟ್ಟ ಪ್ರಕರಣಗಳು. ಈಗಾಗಲೇ ಅವಾರ್ಡ್​ ಆಗಿರುವ ಖಾತೆಗಳಿಗೆ ನೇರವಾಗಿ ಪರಿಹಾರದ ಹಣ ಜಮಾ ಆಗಲಿದೆ. ಇದರೊಂದಿಗೆ ಇನ್ನು ಬಾಕಿ ಇರುವ ಪ್ರಕರಣಗಳಲ್ಲಿನ ರೈತರನ್ನು ಮನವೊಲಿಸಿ ಕಾಮಗಾರಿ ಮಾಡಲಾಗುವುದು. ನಂತರ ಅವರಿಗೆ ಪರಿಹಾರ ನೀಡಲಾಗುವುದು.

ಇದಕ್ಕೆ ರೈತರು ಸಹಕರಿಸಿ ಎಂದರು.

ಕಾವೇರಿ ನೀರಾವರಿ ನಿಗದ ಹೇಮಾವತಿ ನಾಲಾವಲಯದ ಎಇಇ ಎಚ್​.ಆರ್​.ಮುಳಿಧರ್​ ಮಾತನಾಡಿ, ಹೇಮಾವತಿ ಯೋಜನೆ ಕಾಮಗಾರಿ 2011ರಿಂದಲೂ ನಡೆಯುತ್ತಿದೆ. 2025ರಲ್ಲಿ ಮುಖ್ಯ ಚಾನಲ್​ನಿಂದ 6.5 ಕಿ,ಮೀ ಉದ್ದವಿದ್ದು, ಇದರಲ್ಲಿ ಸಾಸಲು ಕೆರೆ ಭಾಗಕ್ಕೆ ನೀರು ಬಿಡಲಾಗುತ್ತಿದೆ. ಆದರೆ ಈ ಚಾನಲ್​ ಭಾಗದ ಮಣ್ಣು ಮರಳು ಮಿಶ್ರೀತವಾಗಿದ್ದು ಇದು ಪದೇಪದೆ ಕುಸಿಯುತ್ತಿದೆ. ಇದಕ್ಕೆ ಶಾಶ್ವತವಾದ ಪರಿಹಾರಕ್ಕೆ ಕಟ್​ ಆ್ಯಂಡ್​ ಕವರ್​ ಕಾಮಗಾರಿ ಮಾಡಬೇಕಾಗಿದೆ ಎಂದರು.

ಮುಖಂಡರಾದ ನಿವೃತ್ತ ಎಎಸ್​ಐ ಕೃಷ್ಣಪ್ಪ, ನಿವೃತ್ತ ಪಶು ವೈದ್ಯಾಧಿಕಾರಿ ಚಂದ್ರಶೇಖರ್​ ಇದ್ದರು.