ಜಿಲ್ಲೆ

ರೈತರ ಬೆಳೆಗಳಿಗೆ ವಾರಕ್ಕೊಮ್ಮೆ ನಾಲೆಗಳ ಮೂಲಕ ನೀರು ಬಿಡಲು ರೇವಣ್ಣ ಆಗ್ರಹ

   ಹಾಸನ: ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ಒಂದು ಬಾರಿ ನಾಲೆಗಳ ಮೂಲಕ ಜಿಲ್ಲೆಯ ರೈತರ ಬೆಳೆಗಳಿಗೆ ನೀರು ಬಿಡಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯಿಸಿದರು.

ರೈತರು ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಒಂದು ತಿಂಗಳ ಮುಂಚೆಯೇ ನೀರು ಹರಿಸಿದ್ದರೆ ಅನುಕೂಲವಾಗುತ್ತಿತ್ತು. ಆಗ ತಮಿಳುನಾಡು, ತುಮಕೂರಿಗೆ ನೀರು ಬಿಟ್ಟರು. ನಾನು ಯಾರ ಬಗ್ಗೆಯೂ ದೂರುವುದಕ್ಕೆ ಹೋಗುವುದಿಲ್ಲ. ಪಾಪ ರೈತರ ಬಗ್ಗೆಯೂ ಗಮನಹರಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯ ಅಧಿಕಾರಿಗಳು ಈ ವರ್ಷ ರೈತರಿಗೆ ನೀರು ಬಿಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪರ್ಯಾಯವಾಗಿ ಬೆಳೆ ಪರಿಹಾರವಾದರೂ ಕೊಡುತ್ತೇವೆ ಎಂದು ಗ್ಯಾರಂಟಿ ನೀಡಿದರೇ ಒಳ್ಳೆಯದು. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಆಗಬೇಕಿರುವ ಹೆದ್ದಾರಿ ಕಾಮಗಾರಿಗಳ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದು, ಹಲವು ಕಾಮಗಾರಿಗಳಿಗೆ ಒಪ್ಪಿಗೆ ಪಡೆದು ಬರಲಾಗಿದೆ. ಅದರಲ್ಲೂ ಹಾಸನ-ಬೇಲೂರು ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಭೂ ಸ್ವಾಧೀನ ಸೇರಿ ರಸ್ತೆ ಕಾಮಗಾರಿಗೆ 680 ಕೋಟಿ ರೂ. ಟೆಂಡರ್ ಪ್ರಕ್ರಿಯೆ ಸೇರಿ ಹಲವು ಕಾಮಗಾರಿಗಳಿಗೆ ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.

ಹೊಳೆನರಸೀಪುರ ಬೈಪಾಸ್ ರಸ್ತೆ ನಿರ್ಮಾಣಕ್ಕೆ 125 ಕೋಟಿ ರೂ. ಹಾಗು ಹೊಳೆನರಸೀಪುರ ಪಟ್ಟಣದೊಳಗೆ 2 ಕಿಲೋ ಮೀಟರ್ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 29 ಕೋಟಿ ರೂ., ಹಂಗರಹಳ್ಳಿ ಬಳಿ ಹೊಸದಾಗಿ ಮತ್ತೊಂದು ಮೇಲ್ಸೇತುವೆ ನಿರ್ಮಾಣಕ್ಕೆ 60 ಕೋಟಿ ರೂ., ಯಡೆಗೌಡನಹಳ್ಳಿ- ಬಿಳಿಕೆರೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ಪಡೆಯಲಾಗಿದೆ. ಅಲ್ಲದೆ 185 ಕಿ.ಮೀ. ಚನ್ನರಾಯಪಟ್ಟಣ- ಮಾಕುಟ್ಟ ಅಂತಾರಾಜ್ಯ ಸಂಪರ್ಕ ರಸ್ತೆ ನಿರ್ಮಾಣಕ್ಕೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಹಾಸನ-ಹುಳಿಯಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ರೈತರ ಭೂಮಿಗೆ ಉತ್ತಮ ಬೆಲೆ ನಿಗದಿಪಡಿಸುವ ಸಂಬಂಧ ಆ.17ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅರಸೀಕೆರೆ ತಾಲ್ಲೂಕು ಭಾಗದ ರೈತರ ಸಭೆ ಕರೆಯಾಗಿದೆ. ಈ ರಸ್ತೆಯು ಶಾಂತಿಗ್ರಾಮದಿಂದ ಹುಳಿಯಾರ- ಚಿತ್ರದುರ್ಗ- ಆಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸಲಿದೆ. ಶಿರಾಡಿಘಾಟ್ ಮಾರ್ಗದ ಸಕಲೇಶಪುರ- ಮಾರನಗಳ್ಳಿ ರಸ್ತೆ ಅಭಿವೃದ್ಧಿಯ ಬಗ್ಗೆಯೂ ಸಚಿವರ ಗಮನ ಸೆಳೆಯಲಾಗಿದೆ ಎಂದು ಹೇಳಿದರು.

ಚನ್ನರಾಯಪಟ್ಟಣ- ಕುಶಾಲನಗರ ನಡುವೆ ರೈಲ್ವೆ ಮಾರ್ಗ ನಿರ್ಮಾಣ, ಹೊಳೆನರಸೀಪುರದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ, ಮತ್ತೊಂದು ಫ್ಲಾಟ್‌ಫಾರ್ಮ್ ನಿರ್ಮಾಣ, ಹೊಳೆನರಸೀಪುರದಲ್ಲಿ ನಿಜಾಮುದ್ದಿನ್ ರೈಲು ನಿಲುಗಡೆ ಹಾಗು ಅರಸೀಕೆರೆ ಜಂಕ್ಷನ್‌ನಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಅವಕಾಶ ನೀಡಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಡಿಜಿಪಿ ದೇವೇಗೌಡರ ಪೋನ್ ತೆಗೆಯುತ್ತಿಲ್ಲ: ರೇವಣ್ಣ

ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ 39 ಕೊಲೆಗಳು ನಡೆದಿವೆ. ಈ ವಿಚಾರವಾಗಿ ದೇವೇಗೌಡರು ಪೊಲೀಸ್ ಮಹಾನಿರ್ದೇಶಕರಿಗೆ ಹತ್ತು ಬಾರಿ ಕರೆ ಮಾಡಿದರೂ ಫೋನ್ ರಿಸೀವ್ ಮಾಡಿಲ್ಲ. ಬಹುಶಃ ಜೆಡಿಎಸ್ ನಾಯಕರ ಫೋನ್ ರಿಸೀವ್ ಮಾಡದಂತೆ ನಿರ್ದೇಶನವೇನಾದರೂ ಇದೆಯೋ ಏನೋ ಗೊತ್ತಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮಾರ್ಮಿಕವಾಗಿ ಹೇಳಿದರು.

ಜೆಡಿಎಸ್‌ಮುಖಂಡ ಕೃಷ್ಣೇಗೌಡ ಹತ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಜುಲೈ 2022ರಿಂದ ಈ ಜುಲೈವರೆಗೂ ಜಿಲ್ಲೆಯಲ್ಲಿ 19 ಕೊಲೆ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ನಮ್ಮ ಪಕ್ಷದ ನಗರಸಭೆ ಸದಸ್ಯನ ಕೊಲೆ ಆಗಿತ್ತು. ನಮ್ಮ ಕುಟುಂಬದ ಮೇಲೂ ಆ್ಯಸಿಡ್ ದಾಳಿ ನಡೆದಿತ್ತು ಎಂದರು.