ಧಾರವಾಡ : ಜಿಲ್ಲೆಯಾದ್ಯಂತ ಅತಿ ಹೆಚ್ಚು ಮಳೆಯಾಗಿದೆ. ಇದರಿಂದಾಗಿ ಶೇ. 15ರಿಂದ 25 ಹಾನಿಯಾದ ಸಿ ಕೆಟಗರಿಯ 601 ಹಾಗೂ ಶೇ. 25ಕ್ಕಿಂತ ಹೆಚ್ಚು ಹಾನಿಯಾದ 571 ಬಿ ಕೆಟಗರಿಯ ಮನೆಗಳನ್ನು ಗುರುತಿಸಲಾಗಿದೆ. ಈವರೆಗೆ 1,172 ಮನೆಗಳಿಗೆ ಹಾನಿಯಾಗಿದೆ. ಇನ್ನೂ ಹಾನಿಯಾದ ಮನೆಗಳು ಉಳಿದಿದ್ದರೆ ಜಿಲ್ಲಾಡಳಿತದಿಂದ ಗುರುತಿಸುವಿಕೆ ಕಾರ್ಯ ಮುಂದುವರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಜರುಗಿದ ಅತಿವೃಷ್ಟಿ ಹಾನಿ ಪರಿಹಾರ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅತಿಯಾದ ಮಳೆಯಿಂದ ನವಲಗುಂದ, ಅಣ್ಣಿಗೇರಿ ತಾಲೂಕುಗಳಲ್ಲಿ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಮೂವರು ಸಾವಿಗೀಡಾಗಿದ್ದಾರೆ. ಸಂತ್ರಸ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲಾದ್ಯಂತ 96,000 ಹೆಕ್ಟೇರ್ ಬೆಳೆ ಹಾನಿಯಾದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕಳೆದ 1 ವಾರದಲ್ಲಿ 46,000 ಹೆಕ್ಟೇರ್ ಬೆಳೆ ನಾಶವಾಗಿದೆ. ಕೇಂದ್ರ ತಂಡ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದು, ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಜಮೆಯಾಗಲಿದೆ ಎಂದು ತಿಳಿಸಿದರು.
38 ಕಿ.ಮೀ. ಲೋಕೋಪಯೋಗಿ ಇಲಾಖೆಯ ರಸ್ತೆಗಳು, 42 ಕಿ.ಮೀ. ಜಿಲ್ಲಾ ರಸ್ತೆಗಳು, 8 ಸೇತುವೆಗಳು, 140 ಅಂಗನವಾಡಿ ಕೇಂದ್ರಗಳು, 432 ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ದುರಸ್ತಿ ಅಥವಾ ಪುನರ್ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗುವುದು. ಎಸ್‌ಡಿಆರ್‌ಎ್ ತಂಡ ಹುಬ್ಬಳ್ಳಿಯಲ್ಲಿ, ಅಗ್ನಿಶಾಮಕ ದಳದ ತಂಡವನ್ನು ನವಲಗುಂದದಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ. ಸಿಇಒ ಡಾ. ಸುರೇಶ ಇಟ್ನಾಳ, ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.