ಶಿಡ್ಲಘಟ್ಟ : ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆ ಯಾರೋಬ್ಬರೂ ಅಸಡ್ಡೆ ತೋರುವುದು ಶೋಭೆ ತರುವ ಪ್ರವೃತ್ತಿ ಅಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಸಿದರು.
ತಾಲೂಕಿನ ಸಾದಲಿ ವ್ಯವಸಾಯ ಸಹಕಾರ ಸಂಘದಿಂದ ಮಂಗಳವಾರ ರೈತರಿಗೆ ಕೆಸಿಸಿ ಸಾಲ ವಿತರಿಸಿ ಮಾತನಾಡಿ, ಬೆಲೆ ಕುಸಿತದಿಂದ ರೈತರು ನಷ್ಟು ಅನುಭವಿಸುತ್ತಿದ್ದರೂ ತನ್ನ ಕಾಯಕವನ್ನು ಮಾತ್ರ ಬಿಡುತ್ತಿಲ್ಲ, ಅವರ ಬಗ್ಗೆ ಗೌರವ ತೋರುವ, ಕಷ್ಟಗಳಿಗೆ ಸ್ಪಂದಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಸಂಕಷ್ಟದ ಸಮಯದಲ್ಲಿಯೂ ಸಹಕಾರ ಸಂಘಗಳು ರೈತರ ಬೆಂಬಲಕ್ಕೆ ನಿಂತಿವೆ. ಸಾದಲಿ ವ್ಯಾಪ್ತಿಯಲ್ಲಿರುವ 19 ಹಳ್ಳಿಗಳ ಪ್ರತಿ ಮಹಿಳೆಗೂ ಬಡ್ಡಿರಹಿತ ಸಾಲ ನೀಡುವ ಮೂಲಕ ಅವರ ಆರ್ಥಿಕ ಪ್ರಗತಿಗೆ ಸಂಘದ ಆಡಳಿತ ಮಂಡಳಿ ಸೇರಿ ಸಿಬ್ಬಂದಿ ಶ್ರಮಿಸಬೇಕೆಂದು ಸೂಚಿಸಿದರು.
ಸಂಕಷ್ಟದ ನಡುವೆಯೂ ಈ ಭಾಗದ ರೈತರು ಸೇರಿ ಮಹಿಳಾ ಸ್ವಸಹಾಯ ಸಂಘಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದುವ ಜತೆಗೆ ಸಕಾಲದಲ್ಲಿ ಮರು ಪಾವತಿಸಿ ಮತ್ತಷ್ಟು ಜನರಿಗೆ ಸೌಲಭ್ಯ ದೊರೆಯುವಂತಾಗಲು ಸಹಕರಿಸಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ಸಾದಲಿ ವ್ಯವಸಾಯ ಸಹಕಾರ ಸಂಘದಿಂದ 2.40 ಕೋಟಿ ರೂ. ಸಾಲ ವಿತರಿಸಲಾಯಿತು. ಸಾದಲಿ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಅಶ್ವತ್ಥರೆಡ್ಡಿ, ಮಾಜಿ ಅಧ್ಯಕ್ಷ ಲಕ್ಷ್ಮೀಪತಿ, ಗ್ರಾಪಂ ಮಾಜಿ ಅಧ್ಯಕ್ಷ ಗೋವಿಂದರಾಜು, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಮೇಲ್ವಿಚಾರಕ ಶ್ರೀನಾಥ್, ಮುಖಂಡರಾದ ದಿಬ್ಬೂರಹಳ್ಳಿ ಡಿಎಸ್‌ಎನ್ ರಾಜು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೀಮಪ್ಪ, ಸಂಘದ ನಿರ್ದೇಶಕರು ಹಾಜರಿದ್ದರು.