ಜಿಲ್ಲೆ

ರೈತರ ಬದುಕು ಹಸನುಗೊಳಿಸುವ ಚಿಂತನೆ: ಎಂ.ಟಿ. ಕೃಷ್ಣೇಗೌಡ


ಅರಕಲಗೂಡು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಆಶೀರ್ವದಿಸಿದರೆ ಕ್ಷೇತ್ರದಲ್ಲಿ ಇಸ್ರೇಲ್ ಕೃಷಿ ಮಾದರಿ ಅನುಷ್ಠಾನಗೊಳಿಸಿ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಒದಗಿಸಿ ರೈತರ ಬದುಕು ಹಸನುಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ತಿಳಿಸಿದರು.

ತಾಲೂಕಿನ ದೊಡ್ಡಮಗ್ಗೆ ಬಿಜಿಎಸ್ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಕ್ಷಿಣಕ್ಕೆ ಜೀವನದಿ ಕಾವೇರಿ, ಉತ್ತರಕ್ಕೆ ಹೇಮಾವತಿ ನದಿ ಹರಿದರೂ ತಾಲೂಕಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗಿಲ್ಲ. ಸಮರ್ಪಕವಾಗಿ ನೀರಾವರಿ ಸೌಲಭ್ಯವಿಲ್ಲದೆ ಕೃಷಿ ಭೂಮಿಯಲ್ಲಿ ಬಿತ್ತಿದ ಬೆಳೆಗಳು ಅತಿವೃಷ್ಟಿ ಅನಾವೃಷ್ಟಿಗೆ ಸಿಲುಕಿ ನಷ್ಟದ ಹೊಡೆತ ಅನುಭವಿಸುವುದು ತಪ್ಪಿಲ್ಲ. ಕೃಷಿಕರು ಇಷ್ಟೆಲ್ಲ ಕಷ್ಟ ಕೋಟಲೆಗಳನ್ನು ಎದುರಿಸಿ ಬೆಳೆ ಬೆಳೆದ ಉತ್ತಮ ಬೆಲೆ ಸಿಗದೆ ಕೈಸುಟ್ಟುಕೊಂಡು ಕಣ್ಣೀರಿನ ಬದುಕು ಸವೆಸುವಂತಾಗಿದೆ. ಅನ್ನದಾತರು ಅನುಭವಿಸುತ್ತಿರುವ ಸಮಸ್ಯೆಗಳ ಅರಿವಿದ್ದು, ಇದಕ್ಕಾಗಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಲು ಇಸ್ರೇಲ್ ಮಾದರಿ ಕೃಷಿ ತಂತ್ರಜ್ಞಾನ ವ್ಯವಸ್ಥೆ ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ಚಿಂತನೆ ನಡೆಸಿ ಮಹತ್ವದ ಯೋಜನೆ ರೂಪಿಸುವ ಜತೆಗೆ ಕೃಷಿ ಕ್ಷೇತ್ರದ ಸವಾರ್ಂಗೀಣ ಉನ್ನತಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.


ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಅಭಿವೃದ್ಧಿ ಶೂನ್ಯವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಇಲ್ಲಿನ ವಿದ್ಯಾರ್ಥಿಗಳು ಮತ್ತು ಯುವಕರು ಹೊರೆ ಜಿಲ್ಲೆಗಳನ್ನು ಅವಲಂಬಿಸುವ ದುಸ್ಥಿತಿ ಬಂದಿದೆ. ಹಲವಾರು ವರ್ಷಗಳಿಂದ ಕ್ಷೇತ್ರ ಸ್ವಾರ್ಥ ರಾಜಕಾರಣದ ಕಪಿಮುಷ್ಠಿಗೆ ಸಿಲುಕಿದ್ದು ಎರಡು ಜೀವ ನದಿಗಳಿದ್ದರೂ ಹಿಂದುಳಿದ ಹಣೆಪಟ್ಟಿ ಹೊತ್ತಿದೆ. ಈ ಬಾರಿ ಮತದಾರರು ಯೋಚಿಸಿ ಬದಲಾವಣೆ ತರುವ ಮುಖೇನ ಕ್ಷೇತ್ರದ ಪ್ರಗತಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.


ಹಿಂದುಳಿದ ವರ್ಗದ ಮುಖಂಡ ಬಿಳಗೂಲಿ ರಾಮೇಗೌಡ ಮಾತನಾಡಿ, ಪ್ರಗತಿಪರ ಕೃಷಿಕ ಕೃಷ್ಣೇಗೌಡ ಅವರಿಗೆ ಜನರ ಸಮಸ್ಯೆಗಳ ಅರಿವಿದೆ. ಮತದಾರರು ಆತ್ಮಾವಲೋಕನ ಮಾಡಿಕೊಂಡು ಮುಂದಿನ ಚುನಾವಣೆಯಲ್ಲಿ ಇವರನ್ನು ಬೆಂಬಲಿಸುವುದು ಸೂಕ್ತವಾಗಿದೆ ಎಂದರು.
ವಕೀಲ ಹೇಮಂತ ಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಮಾಡಿರುವ ಅಭಿವೃದ್ಧಿ ಕೆಲಸಗಳು ಏನೆಂಬುದರ ಬಗ್ಗೆ ಚಿಂತನ ಮಂಥನ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಮತದಾರರು ಪಕ್ಷಾತೀತವಾಗಿ ಕೃಷ್ಣೇಗೌಡರನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.


ಯುವ ಮುಖಂಡ ಶಿರೀನ್ ರಂಗಸ್ವಾಮಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮುಖಂಡರಾದ ಅಜ್ಜೂರು ಪ್ರಸನ್ನ, ಕಣಿಯಾರು ಅಹಮದ್, ಗುರಪ್ಪ, ಕಳ್ಳಿಮುದ್ದನಹಳ್ಳಿ ಲೋಕೇಶ್, ಜಮೀರ್ ಪಾಷಾ ಮಾತನಾಡಿದರು. ಮುಖಂಡರಾದ ಸಣ್ಣೇಗೌಡ, ಪುಟ್ಟರಾಜು, ಬೆಳವಾಡಿ ಕುಮಾರ್, ಚನ್ನೇಗೌಡ, ಮೂರ್ತಿ, ಗೋವಿಂದರಾಜು, ರಂಗಸ್ವಾಮಿ, ಸೋಮಣ್ಣ, ಪಪಂ ಸದಸ್ಯ ಪ್ರದೀಪ್ ಕುಮಾರ್ ಇತರರು ಹಾಜರಿದ್ದರು.


ಕಾರ್ಯಕ್ರಮಕ್ಕೂ ಮುನ್ನ ಕೃಷ್ಣೇಗೌಡ ಅವರನ್ನು ಅಪಾರ ಅಭಿಮಾನಿಗಳು ದೊಡ್ಡಮಗ್ಗೆ ಸರ್ಕಲ್ ನಲ್ಲಿ ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದರು.