ಜಿಲ್ಲೆ

ರೈತರ ಬದುಕಿಗೆ ಆಸರೆ

ಹರಪನಹಳ್ಳಿ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಶೋಷಿತ ಸಮಾಜದ ಶಕ್ತಿಯಾಗಿದ್ದರು ಎಂದು ತಹಸೀಲ್ದಾರ್ ಬಿ.ವಿ.ಗಿರೀಶಬಾಬು ಹೇಳಿದರು.

ಪಟ್ಟಣದ ದೇವರಾಜ ಅರಸು ಭವನದಲ್ಲಿ ಹಿಂದುಳಿದ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಲಕ್ಷಾಂತರ ರೈತರ ಬದುಕಿಗೆ ಆಸರೆಯಾಗಿದ್ದಾರೆ. ಅರಸು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ಸಾಗೋಣ ಎಂದು ನುಡಿದರು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಭೀಮಪ್ಪ ಮಾತನಾಡಿ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ದೇವರಾಜ ಅರಸು ಅವರು 1977 ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಥಾಪನೆ ಮಾಡಿದರು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ. ತುಳಿತಕ್ಕೆ ಒಳಗಾದ ಸಮುದಾಯಗಳನ್ನು ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮೇಲೆ ತರಲು ಅರಸು ಪ್ರಮುಖ ಪಾತ್ರ ವಹಿಸಿದರು. ಬಲಾಢ್ಯ ಸಮುದಾಯಗಳಿಗೆ ಮೀಸಲಾಗಿದ್ದ ರಾಜಕಾರಣದಲ್ಲಿ ಶೋಷಿತ ಸಮುದಾಯವನ್ನು ಮೇಲೆತ್ತಿದರು. ಮೇಲ್ವರ್ಗದ ಪ್ರಾಬಲ್ಯದ ನಡುವೆಯೂ ಐದು ವರ್ಷ ಅವಧಿ ಪೂರ್ಣಗೊಳಿಸಿದ ಮೊದಲ ಮುಖ್ಯಮಂತ್ರಿ ಎಂಬ ದಾಖಲೆ ನಿರ್ಮಿಸಿದರು ಎಂದರು.

ವಕೀಲ ಕಣವಿಹಳ್ಳಿ ಬಿ.ಮಂಜುನಾಥ ಉಪನ್ಯಾಸ ನೀಡಿದರು, ಪುರಸಭೆ ಅಧ್ಯಕ್ಷೆ ಎಂ.ಪಾತೀಮಾಬಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನಿಚ್ಚವನಹಳ್ಳಿ ಭೀಮಪ್ಪ, ಅರಸೀಕೆರೆ ಷಣುಖಪ್ಪ, ಗುಡಿಹಳ್ಳಿ ಹಾಲೇಶ, ಕಬ್ಬಳ್ಳಿ ಮೈಲಪ್ಪ, ಗೋಂದಳಿ ದುರುಗಪ್ಪ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಹರೀಶ್ ನಾಯ್ಕ, ನಿಲಯ ಮೇಲ್ವಿಚಾರಕ ಬಿ.ಎಚ್.ಚಂದ್ರಪ್ಪ, ವೀರಣ್ಣ ಮತ್ತಿಹಳ್ಳಿ, ಸುನೀಲ್ ಕುಮಾರ್, ಜುಂಜಪ್ಪ, ಪ್ರೇಮಾವತಿ, ನಿರ್ಮಲ, ಭಾಗ್ಯವತಿ, ಅನ್ನಪೂರ್ಣ ಇತರರು ಹಾಜರಿದ್ದರು.