ಜಿಲ್ಲೆ

ರೈತರ ಬಗ್ಗೆ ಪತ್ರಕರ್ತರ ಕಾಳಜಿ ಶ್ಲಾಘನೀಯ

ಅರಸೀಕೆರೆ(ಗ್ರಾಮಾಂತರ): ರೈತರ ಬವಣೆಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಪತ್ರಕರ್ತರು ಚರ್ಚಿಸಿರುವುದು ಸ್ವಾಗತಾರ್ಹ ಸಂಗತಿ ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.

ಇತ್ತೀಚೆಗೆ ತಿಪಟೂರಿನಲ್ಲಿ ನಡೆದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಯಶಸ್ವಿಗೊಳಿಸಿದ ತಿಪಟೂರು ತಾಲೂಕು ಕಾರ್ಯನಿರತ ಪತ್ರಕರ್ತರು ಮತ್ತು ಗಣ್ಯರಿಗೆ ನಗರದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕ ಕ್ಷೇತ್ರದಲ್ಲಿ ವ್ಯಾಪಾರ, ಧರ್ಮ ದಾರಿ ತಪ್ಪುತ್ತಿದೆ. ಈ ವ್ಯಾಪ್ತಿಗೆ ರೈತರ ಕೃಷಿ ಉತ್ಪನ್ನಗಳು ಕೂಡ ಹೊರತಾಗಿಲ್ಲ. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಇತ್ತೀಚೆಗೆ ತಿಪಟೂರಿನಲ್ಲಿ ನಡೆದ ರಾಷ್ಟ್ರೀಯ ವಿಚಾರ ಮಂಥನ ಕಾರ್ಯಕ್ರಮದಲ್ಲಿ ತೆಂಗು ಬೆಳೆಗಾರರು ಮತ್ತು ಉತ್ಪನ್ನಗಳ ಬವಣೆ ಬಗ್ಗೆ ಪ್ರಸ್ತಾಪಿಸಿ ಸುದೀರ್ಘ ಚರ್ಚೆ ನಡೆದ ಫಲವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿವೆ. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಬೇಕಿದ್ದು ಅದಕ್ಕೆ ಪೂರಕವಾಗಿ ಕಾರ್ಯನಿರತ ಪತ್ರಕರ್ತರು ರೈತರೊಂದಿಗೆ ಕೈ ಜೋಡಿಸಬೇಕಿದೆ ಎಂದರು.

ಐಎಎಫ್‌ಡಬ್ಲುೃಜೆ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲ, ಐಎಫ್‌ಡಬ್ಲುೃಜೆ ಅಪರ ಕಾರ್ಯದರ್ಶಿ ಎಚ್.ಬಿ.ಮದನ್‌ಗೌಡ, ರವಿ ನಾಕಲಗೂಡು, ತಿಪಟೂರು ಕೃಷ್ಣ, ನಗರಸಭೆ ಉಪಾಧ್ಯಕ್ಷ ಮನೋಹರ್, ರಾಷ್ಟ್ರೀಯ ಮಂಡಳಿ ಸದಸ್ಯ ಆಲ್ಬೂರ್ ಶಿವರಾಜ್, ಹಾಸನ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್, ತಾಲೂಕು ಘಟಕದ ಅಧ್ಯಕ್ಷ ಎಲ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯ ಟಿ.ಆನಂದ್ ಭಾಗವಹಿಸಿದ್ದರು.