ಜಿಲ್ಲೆ

ರೈತರ ಪ್ರತಿಭಟನೆಗೆ ಬೆಚ್ಚಿದ ಸರ್ಕಾರ

ತಿಪಟೂರು: ಕೊಬ್ಬರಿ ಬೆಲೆ ಪಾತಾಳಕ್ಕಿದಿರುವ ನಡುವೆಯೇ ಪ್ರಕೃತಿಯ ನಿರಂತರ ಮುನಿಸು, ಸರ್ಕಾರದ ನೆರವನ್ನು ತಲುಪಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷೃ, ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯ ಮೋಸ.. ಹೀಗೆ ನಾನಾ ಕಷ್ಟಗಳಿಂದ ಬೇಸತ್ತಿರುವ ರೈತರ ಆಕ್ರೋಶದ ಕಟ್ಟೆ ಒಡೆದಿದೆ.
ಮೈಚಳಿಬಿಟ್ಟು ತಿಪಟೂರಿನಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೀದಿಗಿಳಿದ ರೈತ ಸಮುದಾಯದ ಕೂಗಿಗೆ ಸರ್ಕಾರವೇ ಬೆಚ್ಚಿಬಿದ್ದಿದೆ. ಕೊಬ್ಬರಿ ಬೆಲೆ ಹೆಚ್ಚಿಸಲು ಒತ್ತಾಯಿಸಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ತಿಪಟೂರಿನಲ್ಲಿ ಬೃಹತ್ ಹೋರಾಟ ನಡೆಯಿತು.
ಕೊಬ್ಬರಿ ಬೆಲೆ ಕುಸಿತದಿಂದ ತೆಂಗು ಬೆಳೆಯುವ ಸೀಮೆಯ ಎಲ್ಲ ರೈತರೂ ಸಂಕಷ್ಟದಲ್ಲಿದ್ದಾರೆೆ. ಇಂತಹ ಸಂದರ್ಭದಲ್ಲಿ ನೆರವಿಗೆ ಬರಬೇಕಾದ ಸರ್ಕಾರಗಳು ಮೌನವಹಿಸಿವೆ. ನಿದ್ದೆಯಲ್ಲಿರುವ ಸರ್ಕಾರಗಳನ್ನು ರೈತರೇ ಎಚ್ಚರಿಸಬೇಕಿದೆ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಹರಿಹಾಯ್ದರು.
ಹೊರದೇಶಗಳಿಂದ ಅಡಕೆ ಹಾಗೂ ತೆಂಗು ಅಕ್ರಮವಾಗಿ ಆಮದಾಗುತ್ತಿರುವುದೂ ಬೆಲೆ ಕುಸಿತಕ್ಕೆ ಕಾರಣವಾಗಿದೆ. ತೆಂಗು ಹಾಗೂ ಅಡಕೆ ಬೆಳೆಗಾರರು, ವರ್ತಕರು, ಮಾರುಕಟ್ಟೆ ಅಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನೊಳಗೊಂಡ ತೆಂಗು ಮತ್ತು ಅಡಕೆ ಮಂಡಳಿ ಸ್ಥಾಪಿಸಿ, ಎಲ್ಲ ಕಾಲದಲ್ಲಿಯೂ ಬೆಲೆ ಸ್ಥಿರಗೊಳಿಸಲು ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು.
ಸಮಾಜವಾದಿ ನೆಲೆಯಿಂದ ಬಂದಿರುವ ಜೆ.ಸಿ.ಮಾಧುಸ್ವಾಮಿ ಅವರಂತಹ ಸಚಿವರಿಂದ ಇಂತಹ ಬೆಳವಣಿಗೆ ನಿರೀಕ್ಷಿಸಿರಲಿಲ್ಲ. ನಿಮ್ಮೊಂದಿಗೆ ನಾನಿದ್ದೇನೆ ಎಂದು ನೊಂದವರ ಪರ ನಿಲ್ಲುವ ಉದಾರತೆ ತೋರಿಸುತ್ತಿಲ್ಲ. ನಾವೇನೂ ಸರ್ಕಾರದ ಬಳಿ ಭಿಕ್ಷೆ ಬೇಡುತ್ತಿಲ್ಲ. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಕೇಳುತ್ತಿದ್ದೇವೆ ಎಂದರು.
ಮುಖ್ಯಮಂತ್ರಿಗಳು ಒಪ್ಪುತ್ತಾರೋ, ಬಿಡುತ್ತಾರೋ, 33 ದಿನಗಳಿಂದ ಚಳವಳಿ ನಡೆಯುತ್ತಿದ್ದರೂ, ಸೌಜನ್ಯಕ್ಕಾದರೂ ಧರಣಿ ನಿರತ ರೈತರ ಬಳಿ ಬಂದು ಮಾತನಾಡುವ ಸೌಜನ್ಯ ಇಲ್ಲಿನ ಶಾಸಕರಿಗಿಲ್ಲ. ರೈತಪರ ಕಾಳಜಿ ಇಲ್ಲದವರು ಏಕೆ ಮಂತ್ರಿಯಾಗಿದ್ದೀರಿ, ಇಂತಹವರು ಮುಂದೆಯೂ ಇರಬೇಕೋ, ಬೇಡವೋ ಎಂಬುದನ್ನು ನೀವೇ ನಿರ್ಧರಿಸಿ. ರೈತರನ್ನು ಬಿಟ್ಟು ಅಧಿಕಾರ ಚಲಾಯಿಸಿದರೆ ನಿಮ್ಮ ಕತೆ ಮುಗಿಯುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.
ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ತೋಟಗಾರಿಕೆ ಇಲಾಖೆ ಕ್ವಿಂಟಾಲ್ ಕೊಬ್ಬರಿ ಉತ್ಪನ್ನ ದರ 16730ರೂ. ನಿಗದಿಪಡಿಸಿದೆ. ಆದರೆ, ಕೇಂದ್ರ ಇಲ್ಲಿವರೆಗೂ ಈ ಬಗ್ಗೆ ಚಿಂತನೆ ನಡೆಸಿಲ್ಲ. 33 ದಿನಗಳಿಂದ ಆಡಳಿತ ಸೌಧದ ಎದುರು ರೈತರು ಧರಣಿ ಮಾಡುತ್ತಿದ್ದರೂ ಸರ್ಕಾರದ ಯಾವ ಪ್ರತಿನಿಧಿಗಳು ಬಂದು ನಮ್ಮೊಂದಿಗೆ ಮಾತಾಡುವ ಸೌಜನ್ಯ ತೋರಿಸಿಲ್ಲ ಎಂದರು.
ನಗರದ ಹಾಸನ ವೃತ್ತದಿಂದ, ಎಪಿಎಂಸಿ ಮಾರುಕಟ್ಟೆ ಆವರಣದವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿಬಂದ ಮೆರವಣಿಗೆಯಲ್ಲಿ ಸಾವಿರಾರು ರೈತರು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಭಾಗವಹಿಸಿ ಬೆಂಬಲ ಸೂಚಿಸಿದರು.

ಮಾರ್ಗ ಬದಲಿಸಿದ ಸಚಿವ ಬಿ.ಸಿ.ನಾಗೇಶ್ :
ರೈತ ಸಮಾವೇಶದ ಸಂದರ್ಭ, ರೈತರು ಹಾರಾಜಿಗಿಟ್ಟ ಒಂದು ಕಿಲೋ ಕೊಬ್ಬರಿಯನ್ನು ತಿಮ್ಲಾಪುರದ ರೈತರೊಬ್ಬರು ಒಂದೂವರೆ ಸಾವಿರಕ್ಕೆ ಕೂಗುವ ಮೂಲಕ ಆಳುವ ಸರ್ಕಾರದ ರೈತವಿರೋಧಿ ನಿಲುವು ಅಣಕಿಸಿದರು.
ಕಷ್ಟಪಟ್ಟು ಬೆಳೆದ ಕೊಬ್ಬರಿಗೆ ನ್ಯಾಯಯುತ ಬೆಲೆಗಾಗಿ ಆಗ್ರಹಿಸಿ ರೈತರು ನಡೆಸುತ್ತಿರುವ ಧರಣಿ ಶುಕ್ರವಾರ 33ನೇ ದಿನಕ್ಕೆ ತಲುಪಿದ್ದು, ಮತ್ತೊಮ್ಮೆ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಿದರು. ಆದರೆ ರೈತರ ಸಮಾವೇಶ ಸಾಗುವ ಮಾರ್ಗದಲ್ಲಿ ಕಾಣಿಸಿಕೊಂಡ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮೆರವಣಿಗೆ ಕಂಡು ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಬಳಿ ಯೂ ಟರ್ನ್ ತೆಗೆದುಕೊಂಡು ಬೇರೆ ದಾರಿಯಲ್ಲಿ ಸಾಗಿ ಹೋದರು.

ಇದು ತೆಂಗು ಬೆಳೆಗಾರರ ಬದುಕಿನ ಸ್ವಾಭಿಮಾನಿ ಸಮಾವೇಶ. ನಮ್ಮ ಬದುಕೇ ಇಂದಿನ ಸ್ವಾಭಿಮಾನಿ ಸಮಾವೇಷ, ಊರಲ್ಲಿ ರಾಜಕೀಯ, ಇತರ ಅನ್ಯ ಚಿಂತನೆ ಮಾಡುವುದು ಬಿಟ್ಟು, ನಿಮ್ಮ ಬದುಕಿನ ಬಗ್ಗೆ ರೈತರು ಯೋಚಿಸಬೇಕು. | ಬಡಗಲಪುರ ನಾಗೇಂದ್ರ ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

ಸಾವಿರಾರು ರೈತರು ಕಷ್ಟ ಹೇಳಿಕೊಳ್ಳಲು ಬೀದಿಗಳಿದು ಪ್ರತಿಭಟನೆ ನಡೆಸ್ತಿದ್ರೂ ತಿರುಗಿ ನೋಡದ ಸರ್ಕಾರಕ್ಕೆ ದಿಕ್ಕಾರ. ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ರೈತರ ಕಷ್ಟ ಕೇಳುವ ಸೌಜನ್ಯ ತೋರಿಸಲಿಲ್ಲ. ಪೊಲೀಸರನ್ನು ಮಧ್ಯೆಬಿಟ್ಟು ಮಾತನಾಡಿದರೆ ರೈತನಿಗೇನು ಉಪಯೋಗ? ಹೆಣ ಕಾಯೋಕು ಇವ್ರೇ, ರೈತನ ಸಮಸ್ಯೆ ಕೇಳೋಕೂ ಇವ್ರೇನಾ? | ಮಲ್ಲಿಕಾರ್ಜುನ್ ತೆಂಗು ಬೆಳೆಗಾರ