ಜಿಲ್ಲೆ

ರೈತರ ಪರ ಧ್ವನಿಯೆತ್ತದ ಸರ್ಕಾರ: ಜನತಾ ಜಲಧಾರೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ

Chikkaballapur

ಶಿಡ್ಲಘಟ್ಟ: ಗುತ್ತಿಗೆದಾರರ ಕಣ್ಣಿಗೆ ಬೆಣ್ಣೆ, ರೈತರ ಕಣ್ಣಿಗೆ ಸುಣ್ಣ ಎಂಬ ನಿಲುವು ತಾಳಿರುವ ಬಿಜೆಪಿ ಸರ್ಕಾರದಿಂದ ಈ ಭಾಗಕ್ಕೆ ಎತ್ತಿನಹೊಳೆ ಯೋಜನೆಯ ನೀರು ಬರಲು ಸಾಧ್ಯವೇ?. ಒಂದೊಮ್ಮೆ ಬಂದಿದ್ದೇ ಆದರೆ ಅದು ಈ ಭಾಗದ ರೈತರ ಹಾಗೂ ಜನರ ಪುಣ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ನಗರದ ಹೊರವಲಯದ ಹಂಡಿಗನಾಳ ಬಳಿಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜೆಡಿಎಸ್ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿ, ದೇಶದ ಸಮಸ್ತ ಜನರ ಹಾಗೂ ರೈತರ ಪರ ಧ್ವನಿಯೆತ್ತಬೇಕಾದ ರಾಷ್ಟ್ರೀಯ ಪಕ್ಷಗಳು ದೇಶದಲ್ಲಿ ಕೋಮು ಸಾಮರಸ್ಯ ಕದಡುವ ಮೂಲಕ ರಾಜಕೀಯ ಮಾಡುತ್ತಿವೆ. ಜಾತ್ಯತೀತ ರಾಷ್ಟ್ರದಲ್ಲಿ ಪ್ರತಿಯೊಬ್ಬರೂ ಸಹೋದರರಂತೆ ಜೀವನ ನಡೆಸುವ ವಾತಾವರಣ ನಿರ್ಮಿಸಬೇಕಾದ ಸರ್ಕಾರಗಳು ದ್ವೇಷದ ರಾಜಕಾರಣ ಮಾಡುತ್ತಾ ಕಾಲಹರಣ ಮಾಡುತ್ತಿವೆ ಎಂದರು.

ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವ ಮೂಲಕ ಮಹತ್ತರ ಘೋಷಣೆಗಳನ್ನು ಅನುಷ್ಠಾನಗೊಳಿಸಿದರು. ಹಾಗಾಗಿ ಮುಂಬರುವ 2023ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ ನೀಡುವ ಮೂಲಕ ರಾಜ್ಯದ ರೈತರ ಹಿತ ಕಾಪಾಡಬೇಕು ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಸತ್ತೋನ ಮನೆ ಸಂಕಟ ಯಮರಾಜನಿಗೇನು ಗೊತ್ತು ಎನ್ನುವ ಹಾಗೆ ದೇಶದ ಜನರ ಹಾಗೂ ರೈತರ ಸಂಕಷ್ಟ ಪ್ರಧಾನಿ ಮೋದಿ ಅವರಿಗೆ ಏನು ಗೊತ್ತಿದೆ. ಬೆಲೆ ಏರಿಕೆ ನಿಭಾಯಿಸಲಾಗದವರು ದೇಶದಲ್ಲಿ ಹಿಜಾಬ್, ಹಲಾಲ್, ಜಟ್ಕಾ ಮತ್ತಿತರ ವಿಷಯಗಳಿಂದ ರಾಜಕಾರಣ ಮಾಡುತ್ತಿದ್ದಾರೆ. ರೌಡಿ ಸತ್ತರೆ ಕುಟುಂಬಕ್ಕೆ 25 ಲಕ್ಷ ರೂ. ನೀಡುವ ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರನೋರ್ವ ಸಾಲದ ಸುಳಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡರೆ ಕನಿಷ್ಠ ಸಾಂತ್ವನ ಹೇಳುವ ಸಂಸ್ಕಾರವಿಲ್ಲ ಎಂದರು.

ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ಜನತಾ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಬಿಟ್ಟರೆ ಬಹುಶಃ ಈವರೆಗೂ ರಾಜ್ಯದ ರೈತರು ಸೇರಿ ನಾಗರಿಕರು, ಅಲ್ಪಸಂಖ್ಯಾತರು, ಮಹಿಳೆಯರಿಗೆ ನ್ಯಾಯ ಸಿಕ್ಕಿಲ್ಲ ಎಂದರು. ಕಳೆದ ಚುನಾವಣೆಯಲ್ಲಿ ರಾಜ್ಯಾದ್ಯಂತ ಅತಿ ಕಡಿಮೆ ಅಂತರದಲ್ಲಿ ಸುಮಾರು 25ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ಚಿಕ್ಕಬಳ್ಳಾಪುರ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ಮುನೇಗೌಡ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಜಿಪಂ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಮುಖಂಡರಾದ ಹುಜಗೂರು ರಾಮಣ್ಣ, ಜೆ.ವಿ.ಸದಾಶಿವ, ಡಾ.ಧನಂಜಯರೆಡ್ಡಿ ಇತರರಿದ್ದರು.

ಬೈಕ್ ರ‌್ಯಾಲಿ: ಹಂಡಿಗನಾಳದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಜನತಾ ಜಲಧಾರೆ ಸಾರ್ವಜನಿಕ ಸಮಾರಂಭದ ನಂತರ ಜಲಧಾರೆ ರಥಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಚಾಲನೆ ನೀಡಿದರು. ನಂತರ ಅಮ್ಮನಕೆರೆಗೆ ಪೂಜೆ ಸಲ್ಲಿಸಿದ ಗಣ್ಯರು ಕೆರೆ ನೀರು ಸಂಗ್ರಹಿಸಿ ಹೊರಟ ರಥದೊಂದಿಗೆ ಸಾವಿರಾರು ಕಾರ್ಯಕರ್ತರು ಬೈಕ್ ರ‌್ಯಾಲಿ ಮೂಲಕ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.

ರಥ ಸಾಗುವ ಹಾದಿ:ಜನತಾ ಜಲಧಾರೆ ಅಂಗವಾಗಿ ನಗರದ ಹೊರವಲಯದ ಹಂಡಿಗನಾಳ ಬಳಿಯ ಅಮ್ಮನಕೆರೆಯ ನೀರನ್ನು ಸಂಗ್ರಹಿಸಿ ನಂತರ ನಗರದ ಮೂಲಕ ಸಂಚರಿಸಿದ ಜನತಾ ಜಲಧಾರೆ ರಥವು ತಾಲೂಕಿನ ಅಬ್ಲೂಡು, ದಿಬ್ಬೂರಹಳ್ಳಿ, ಲಕ್ಷ್ಮಿವೆಂಕಟೇಶ್ವರಸಾಗರ ಕೆರೆ, ಚಿಲಕಲನೇರ್ಪು ಹೋಬಳಿಯ ಕೋರ್ಲಪರ್ತಿ, ಬುರುಡಗುಂಟೆ, ಏನಿಗದೆಲೆ ಮೂಲಕ ಕೆಂಚಾರ್ಲಹಳ್ಳಿಯವರೆಗೂ ಸಾಗಿತು.

ರಾಜ್ಯದ ನದಿ ನೀರು ಸದ್ಬಳಕೆ, ನೀರಾವರಿ ಯೋಜನೆಗಳ ಅನುಷ್ಠಾನ ಸೇರಿ ವಿವಿಧ ಆಶಯಗಳೊಂದಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿರುವ ಜನತಾ ಜಲಧಾರೆ ಎಂಬ ಸಂಕಲ್ಪ ಸಾಕಾರವಾಗಬೇಕು. ಇದಕ್ಕೆ 2023ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಬಿ.ಎನ್.ರವಿಕುಮಾರ್, ಜೆಡಿಎಸ್ ಮುಖಂಡ