ಹುಮನಾಬಾದ್: ರಾಜ್ಯದ ವಿವಿಧೆಡೆ ಅತಿವೃಷ್ಟಿಯಿಂದ ಬಹಳ ಹಾನಿಯಾಗಿದ್ದು, ಸರ್ಕಾರ ಸೂಕ್ತ ಮಾಹಿತಿ ಕಲೆ ಹಾಕಿ ರೈತರಿಗೆ ಉಪಯೋಗವಾಗುವ ಕಾರ್ಯಕ್ರಮ ರೂಪಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಭಾನುವಾರ ತಾಲೂಕಿನ ಮರಕಲ್ ಸಮೀಪ ಅತಿವೃಷ್ಟಿ ಹಾನಿ ವೀಕ್ಷಣೆ ಮಾಡಿ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದಾಗ ದೊಡ್ಡ, ಸಣ್ಣ ರೈತರೆಂದು ತಾರತಮ್ಯ ಮಾಡದೆ ಎಲ್ಲ ರೈತರಿಗೂ ಪರಿಹಾರ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ವ್ಯಾಪಕ ಹಾನಿಯಾಗಿರುವ ಕಾರಣ ನಿಯಮ, ಮಾರ್ಗಸೂಚಿ ಬದಲಿಸಿ ಹೆಚ್ಚಿನ ಪರಿಹಾರ ನೀಡಿ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ರೈತರು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಆಲಿಸಿದ್ದೇನೆ. ಈ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುವೆ. ರೈತರಿಗೆ ತಕ್ಷಣ ಪರಿಹಾರ ಹಾಗೂ ಹಿಂಗಾರು ಬಿತ್ತನೆ ಸೇರಿದಂತೆ ಮತ್ತಿತರ ಕಾರ್ಯಕ್ಕೆ ಸಹಕರಿಯಾಗಲು ಪ್ರಯತ್ನಿಸುವುದಾಗಿ ತಿಳಿಸಿದರು.
ಶಾಸಕ ರಾಜಶೇಖರ ಪಾಟೀಲ್ ಅವರು ಕ್ಷೇತ್ರದಲ್ಲಿನ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ಅವರ ಗಮನ ಸೆಳೆದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಕಂಡ್ರೆ, ಶಾಸಕ ರಹೀಮ್ ಖಾನ್, ಪ್ರಮುಖರಾದ ವೀರಣ್ಣ ಪಾಟೀಲ್, ಮಹಾಂತಯ್ಯ ತೀರ್ಥ ಅಫ್ಸರ್ಮಿಯ್ಯಾ, ತಹಸೀಲ್ದಾರ ನಾಗಯ್ಯ ಹಿರೇಮಠ, ಡಾ.ಗೋವಿಂದ, ಡಾ.ಮಲ್ಲಿಕಾರ್ಜುನ, ವಾಮನರಾವ, ನೆಹರು, ಓಂಕಾರ ಇದ್ದರು.
ಹೆಚ್ಚು ಮಳೆಯಿಂದ ಫಲವತ್ತಾದ ಮಣ್ಣು ಸಮೇತ ಬೆಳೆ ಕೊಚ್ಚಿಕೊಂಡು ಹೊಗಿ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ವಿಳಂಬ ಮಾಡದೆ ಪರಿಹಾರ ಒದಗಿಸಲು ಸರ್ಕಾರ ಮುಂದಾಗಬೇಕು. ನಿದ್ರೆಗೆ ಜಾರಿರುವ ಈ ಸರ್ಕಾರವನ್ನು ಎಬ್ಬಿಸಿ ಸಂಕಷ್ಟದಲ್ಲಿದ್ದವರ ನೆರವಿಗೆ ಬರುವಂತೆ ಮಸಿದ್ದರಾಮಯ್ಯ ಒತ್ತಡ ಹಾಕಬೇಕು.| ರಾಜಶೇಖರ ಪಾಟೀಲ್, ಶಾಸಕ