ಚನ್ನರಾಯಪಟ್ಟಣ: ಕೆಐಎಡಿಬಿಯಿಂದ ಭೂಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ತಾಲೂಕು ಹಾಗೂ ಜಿಲ್ಲಾ ಕೃಷಿಕ ಸಮಾಜ ಬೆಂಬಲ ನೀಡುತ್ತಿರುವುದಾಗಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ. ಶ್ರೀನಿವಾಸಗೌಡ ಹೇಳಿದರು.
ಚನ್ನರಾಯಪಟ್ಟಣ ಹೋಬಳಿಯ ನಾಡಕಚೇರಿಯ ಬಳಿ ರೈತರು ಆರಂಭಿಸಿರುವ ಧರಣಿಯು ಶುಕ್ರವಾರಕ್ಕೆ 33ನೇ ದಿನಕ್ಕೆ ಕಾಲಿರಿಸಲಿದೆ. ಗುರುವಾರದ 32ನೇ ದಿನದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೆಐಎಡಿಬಿಯ ಭೂಸ್ವಾಧೀನ ಪ್ರಕ್ರಿಯೆಯಿಂದ ರೈತರಿಗೆ ಅನನುಕೂಲವಾಗಲಿದೆ. ಲವತ್ತಾದ ಕೃಷಿ ಭೂಮಿಯನ್ನು ಸುಮಾರು ವರ್ಷಗಳಿಂದ ವಂಶಪಾರಂಪರ್ಯವಾಗಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಭೂಮಿ ಇಲ್ಲದಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಇದನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಚ್.ಎಂ. ರವಿಕುಮಾರ್ ಮಾತನಾಡಿ, ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೈಗಾರಿಕಾ ಸಚಿವರಿಗೆ ಕೃಷಿಕ ಸಮಾಜದಿಂದ ಮನವಿ ಸಲ್ಲಿಸಲಾಗುವುದು ಎಂದರು.
ಜಿಪಂ ಮಾಜಿ ಅಧ್ಯಕ್ಷ ಬಿ. ರಾಜಣ್ಣ ಮಾತನಾಡಿ, ಹಣದ ಆಸೆಗಾಗಿ ಭೂಮಿಯನ್ನು ಕೊಡಲು ರೈತರಿಗೆ ಇಷ್ಟವಿಲ್ಲ. ರೈತರು ಭೂಮಿ ಕೊಡಲು ಸಮ್ಮತಿಸಿರುವುದಾಗಿ ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದೆ. ಆದರೆ, ಇದು ಸುಳ್ಳು. ಈ ರೀತಿ ಸರ್ಕಾದವರೇ ರೈತರಲ್ಲದವರಿಂದ ಸುಳ್ಳು ಹೇಳಿಕೆ ಕೊಡಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರ ಇರುವುದರಿಂದ ಸಾವಿರಾರು ಎಕರೆ ಭೂಸ್ವಾಧಿನ ಮಾಡಿಕೊಳ್ಳಲಾಗುತ್ತದೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಲಿದೆ. ಆದ್ದರಿಂದ, ಅವರ ಹೋರಾಟವನ್ನು ಬೆಂಬಲಿಸುವುದಾಗಿ ಹೇಳಿದರು.
ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಸದಸ್ಯರಾದ ಮಾರೇಗೌಡ, ನಟರಾಜ್, ರಾಜೇಶ್, ತಾಪಂ ಮಾಜಿ ಸದಸ್ಯ ವೆಂಕಟೇಶ್, ಮುಖಂಡರಾದ ಕೃಷ್ಣಪ್ಪ, ಮಾರೇಗೌಡ, ಮುಕುಂದ, ಸೋಮತ್ತನಹಳ್ಳಿ ರಾಮು, ಗೋಕರೆ ಗೋಪಾಲ್, ವೆಂಕಟರಮಣಪ್ಪ, ಮೋಹನ್,ಕಾರಹಳ್ಳಿ ಶ್ರೀನಿವಾಸ್, ಅಶ್ವತ್ಥಪ್ಪ, ಕೃಷ್ಣಮೂರ್ತಿ ಮತ್ತಿತರರಿದ್ದರು.