ಕಲಬುರಗಿ: ಗ್ರಾಮೀಣ ವಿಧಾನ ಸಭೆ ಕ್ಷೇತ್ರದ, ಆಳಂದ ತಾಲೂಕಿನ ನರೋಣಾದಲ್ಲಿ ವಿದ್ಯುತ್ ತಂತಿ ತಗುಲಿ ರೈತ ಮೃತಪಟ್ಟಿದ್ದಾನೆ. ಉಳುಮೆ ಮಾಡುವ ರೈತನ ಬಾರುಕೋಲು ತಂತಿಗೆ ತಗುಲುತ್ತಿದೆ, ತಂತಿ ಎಲ್ಲೆಂದರಲ್ಲಿ ಜೋತು ಬೀಳುತ್ತಿವೆ. ರೈತರ ಜೀವ ಹೋಗ್ತಾ ಇದೆ ಏನು ಮಾಡ್ತಾ ಇದ್ದೀರಿ? ಎಂದು ಜೆಸ್ಕಾಂ ಅಧಿಕಾರಿಗೆ ಶಾಸಕ ಬಸವರಾಜ ಮತ್ತಿಮಡು ತರಾಟೆಗೆ ತೆಗೆದುಕೊಂಡರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಕೃತಿ ವಿಕೋಪ ಸಂಬAಧಿಸಿದ, ಮುಂಗಾರು ಮಳೆ ಅವಧಿ ಪೂರ್ಣ ಸಿದ್ಧತೆ, ಮುಂಜಾಗ್ರತೆ ಕ್ರಮಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಕ್ಷೇತ್ರದ ಜವಳಗಾ (ಬಿ), ಕರಹರಿ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಬಿದ್ದು, ಕೇಬಲ್‌ಗಳು ಜೋತಾಡುತ್ತಿದ್ದರೂ ತೆಗೆಯುತ್ತಿಲ್ಲ. ನರೋಣಾ ಸೇರಿ ವಿವಿಧ ವಿದ್ಯುತ್ ತಂತಿ ಕೈಗೆಟಕುವಷ್ಟು ಕೆಳಕ್ಕೆ ಇವೆ. ಕೂಡಲೇ ಎಲ್ಲವನ್ನು ಸರಿಪಡಿಸಿ. ಹೀಗೆ ಮುಂದುವರಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮುಂಗಾರು ಆರಂಭವಾಗಿದ್ದು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸರಿಯಾಗಿ ನೀಡಬೇಕು. ಸ್ಟಾಕ್ ಇಲ್ಲ ಎಂದು ಕುಂಟು ನೆಪ ಹೇಳಬಾರದು. ಮಳೆ ಗಾಳಿಗೆ ರೇಷ್ಮೆ ಶೆಡ್‌ಗಳು ಬಿದ್ದಿದ್ದು, ತಕ್ಷಣ ಪರಿಹಾರ ನೀಡಬೇಕು. ಪ್ರವಾಹದಿಂದ ಕೊಚ್ಚಿ ಹೋದ ಜಮೀನುಗಳಿಗೆ ಗಡಿ ಗುರುತಿಸಿ, ಪರಿಹಾರ ನೀಡಬೇಕು. ಬಸವಕಲ್ಯಾಣದ ಅಟ್ಟೂರ ಕೆರೆ ಒಡೆದು ಜಮೀನು ಹಾನಿ ಆಗಿದ್ದು, ವರದಿ ಸಲ್ಲಿಸಿ, ಪರಿಹಾರ ದೊರಕಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ಇತರೆ ಇಲಾಖೆ ಸೇರಿ ಸಂಪರ್ಕ ರಸ್ತೆ, ಸೇತುವೆ, ಪ್ರವಾಹದಿಂದ ಹಾನಿಗೀಡಾದ ಬಗ್ಗೆ ನಿಗಾ ಇಡಬೇಕು. ತಾಲೂಕು ಆರೋಗ್ಯ ಅಧಿಕಾರಿಗಳು ಆಸ್ಪತ್ರೆಯಲ್ಲಿಯೇ ಇರುವುದಿಲ್ಲ. ಸಿಬ್ಬಂದಿ ಇರುವುದಿಲ್ಲ. ರೋಗಿಗಳನ್ನು ವಿನಾಕಾರಣ ಕಲಬುರಗಿಗೆ ಕಳುಹಿಸುತ್ತಿದ್ದಾರೆ. ಹಾವು ಕಡಿತಕ್ಕೆ ಔಷಧವೇ ಇಲ್ಲ. ಕೂಡಲೇ ಹಾವು ಕಡಿತದ ಔಷಧ ಸಂಗ್ರಹಿಸಿ ಇಡಬೇಕು. ಹಾವು ಕಚ್ಚಿ ಮೃತ ರೈತರಿಗೆ ಪರಿಹಾರ ನೀಡಿಲ್ಲವೇಕೆ ಎಂದು ಪ್ರಶ್ನಿಸಿದರು. ಅಧಿಕಾರಿ ಎಸಿ ಆಫೀಸ್‌ನಲ್ಲಿ ಫೈಲ್ ಇದೆ ಎಂದಾಗ? ಎಷ್ಟು ದಿನಾ ಇಡ್ತೀರಿ? ಫಾಲೋಪ್ ಮಾಡಿ, ಬಗೆಹರಿಸಿ ಎಂದು ಸೂಚಿಸಿದರು.
ಇಒ ಸೈಯದ್ ಪಟೇಲ್, ತಹಸೀಲ್ದಾರ್ ಮಹಮ್ಮದ್ ಮೊಹಸೀನ್, ತಹಸೀಲ್ದಾರ್ ನಾಗಮ್ಮ, ಇಒ ಅಮರೇಶ ಪಾಟೀಲ್ ಇದ್ದರು.