ಜಿಲ್ಲೆ

ರೈತರ ಜಾತ್ರೆಗೆ ತೆರೆ


ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ‘ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ 4 ದಿನಗಳ ಕೃಷಿ ಮೇಳ ಮಂಗಳವಾರ ತೆರೆ ಕಂಡಿತು. ಮೇಳದಲ್ಲಿ ರೈತರು ಸೇರಿದಂತೆ ಅಂದಾಜು 15 ಲಕ್ಷ ಜನರು ಭಾಗಿಯಾಗಿ ಲಾಭ ಪಡೆದರು.
ರೈತರು ಮುಂಗಾರು ಹಂಗಾಮು ಮುಗಿಸಿ ಹಿಂಗಾರು ಬಿತ್ತನೆಗೆ ಸಜ್ಜಾಗುವ ಸಂದರ್ಭದಲ್ಲೇ ಪ್ರತಿ ವರ್ಷ ಕೃಷಿ ಮೇಳ ಆಯೋಜಿಸಲಾಗುತ್ತದೆ. ವ್ಯವಸಾಯಕ್ಕೆ ಅಗತ್ಯ ಸಾಮಗ್ರಿ ಖರೀದಿ ಜತೆಗೆ ಉತ್ಕೃಷ್ಟ ಗುಣಮಟ್ಟದ ಬಿತ್ತನೆ ಬೀಜ ಖರೀದಿಗೆ ರಾಜ್ಯದ ವಿವಿಧ ಕಡೆಗಳಲ್ಲಿನ ರೈತರು ಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ನೂತನ ಯಂತ್ರೋಪಕರಣ, ಪ್ರಯೋಗ, ಕೃಷಿ ತಂತ್ರಜ್ಞಾನ ಹೀಗೆ ವಿವಿಧ ಕೃಷಿ ಮಾಹಿತಿ ನೀಡುವಲ್ಲಿ ಸಹ ಮೇಳ ಯಶಸ್ವಿಯಾಗಿದೆ.
ಇಂದಿನ ದಿನಗಳಲ್ಲಿ ಸಾಂಪ್ರದಾಯಿಕ ಕೃಷಿಗಿಂತ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದು ಅನಿವಾರ್ಯವೂ ಆಗಿದೆ. ಹೀಗಾಗಿ ರೈತ ಸಮೂಹಕ್ಕೆ ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಮಾಹಿತಿ ನೀಡಲಾಗುತ್ತದೆ. ವಿವಿಯ ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರಕ್ಕೆ ಸಾವಿರಾರು ರೈತರು ಭೇಟಿ ನೀಡಿ ವಿಜ್ಞಾನಿಗಳ ಜತೆಗೆ ಚರ್ಚಿಸಿ ಸಲಹೆ, ಮಾರ್ಗದರ್ಶನ ಪಡೆದರು.
ವಿಶ್ವ ವಿದ್ಯಾಲಯ ಕೇವಲ, ಚರ್ಚೆ, ವಿಚಾರಗೋಷ್ಠಿ, ಕಾರ್ಯಾಗಾರಕ್ಕೆ ಸೀಮಿತವಾಗಿಲ್ಲ. ಇಂತಹ ಕಾರ್ಯಕ್ರಮಗಳ ಆಯೋಜನೆ ಜತೆಗೆ ರೈತರಿಗೆ ಉಪಯುಕ್ತ ಮಾಹಿತಿ ಒದಗಿಸುವ ಪ್ರಕಟಣಾ ಕೇಂದ್ರವನ್ನೂ ಹೊಂದಿದೆ. ಈ ಬಾರಿಯ ಮೇಳದಲ್ಲಿ ಕೇಂದ್ರದಿಂದ ಲಕ್ಷಾಂತರ ರೂ. ಮೌಲ್ಯದ ಪುಸ್ತಕಗಳು ಮಾರಾಟವಾಗಿವೆ.