ಜಿಲ್ಲೆ

ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪಲಿ

ಹನೂರು: ನಾಲೆಗಳಲ್ಲಿ ಹೂಳು ತೆಗೆಸುವುದರ ಜತೆಗೆ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರಿನ ಸೌಕರ್ಯ ಕಲ್ಪಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿನ್ನತ್ತು ಜಲಾಶಯದ ನಾಲೆಗಳಲ್ಲಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಹನೂರು ಭಾಗದಲ್ಲಿ ಹೆಚ್ಚಿನ ರೈತರು ಕೃಷಿಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಸಮರ್ಪಕ ನೀರಾವರಿ ಸಿಗದ ಪರಿಣಾಮ ಕೃಷಿಗೆ ಹಿನ್ನಡೆಯಾಗುತ್ತಿದೆ. ರೈತರಿಗೆ ಸಮರ್ಪಕ ನೀರಾವರಿ ಸೌಕರ್ಯ ಒದಗಿಸುವ ಸಲುವಾಗಿ ಯೋಜನೆಯನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕೆಲಸ ಹಂತಹಂತವಾಗಿ ಕಾರ್ಯರೂಪಕ್ಕೆ ಬರಲಿದೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಕೆಲ ಜಲಾಶಯಗಳು ಭರ್ತಿಯಾಗಿವೆ. ಕೆಲವು ಕಡೆಗಳಲ್ಲಿ ನಾಲೆಗಳಲ್ಲಿ ಹೂಳು ತುಂಬಿರುವುದರಿಂದ ರೈತರ ಜಮೀನುಗಳಿಗೆ ಸಮರ್ಪಕ ನೀರು ತಲುಪುತ್ತಿರಲಿಲ್ಲ. ಈ ಬಗ್ಗೆ ರೈತರಿಂದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

ನರೇಗಾ ಯೋಜನೆಯಡಿ ಹೂಳು ತೆಗೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕಾರ್ಯ ಪ್ರಗತಿಯಲ್ಲಿದೆ. ಹಾಗೆಯೇ ಇದೀಗ ಮಿನ್ನತ್ತು ಜಲಾಶಯವು ಭರ್ತಿಯಾಗಿದ್ದು, ನಾಲೆಯಲ್ಲಿ ಆರಂಭಿಸುವ ಹೂಳು ತೆಗೆಯುವ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ನೀರು ಹರಿಸಬೇಕು. ಇನ್ನು ನರೇಗಾ ಯೋಜನೆಯಡಿ ಇಂತಹ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ರೈತರಿಗೆ ಅನುಕೂಲವಾಗುವುದರ ಜತೆಗೆ ಸ್ಥಳೀಯವಾಗಿ ಜನರಿಗೆ ಉದ್ಯೋಗವನ್ನು ದೊರಕಿಸಿ ಕೊಟ್ಟಂತಾಗುತ್ತದೆ ಎಂದರು.

ತಾಪಂ ಇಒ ಉಮೇಶ್, ನೀರಾವರಿ ಇಲಾಖೆಯ ಎಇ ಪ್ರತಾಪ್, ಪಿಡಿಒ ಪುಷ್ಪಲತಾ, ಗ್ರಾಪಂ ಸದಸ್ಯ ಪಳನಿಸ್ವಾಮಿ, ಮುಖಂಡರಾದ ಮುನಿಯಪ್ಪ, ತಂಗವೇಲು, ರಾಜೇಂದ್ರ, ವಸಂತಕುಮಾರ್, ಬಸವರಾಜು, ಕಾಮರಾಜು ಅರುಳ್‌ಸ್ವಾಮಿ, ನಾಗರಾಜು ಇತರರು ಇದ್ದರು.