ಮುಳಬಾಗಿಲು: ರಾಗಿ ಖರೀದಿಗೆ ಸರ್ಕಾರ ಹಲವು ನಿಬಂಧನೆ ಹಾಕಿದ್ದು, ಬಹುತೇಕ ರೈತರು ರಾಗಿ ಮಾರಾಟದಿಂದ ವಂಚಿತರಾಗುತ್ತಿದ್ದಾರೆ. 2021&-22ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರೈತರ ನೋಂದಣಿಗಾಗಿ ್ರೂಟ್ಸ್ ಐ.ಡಿ.ಕಡ್ಡಾಯ ಮಾಡಿದ್ದು, ಐ.ಡಿ.ಪಡೆದರೂ ಸರ್ಕಾರ ಖರೀದಿಗೆ ಮಿತಿ ನಿಗದಿಪಡಿಸಿ 25 ಸಾವಿರ ರೈತರಲ್ಲಿ 120 ರೈತರಿಗೆ ಮಾತ್ರ ನೋಂದಣಿಗೆ ಅವಕಾಶ ನೀಡಿರುವುದು ಕಂಡು ಬಂದಿದೆ. ಫ್ರೂಟ್ಸ್ ಐ.ಡಿಯಲ್ಲಿ ರಾಗಿ ಬೆಳೆ ಮಾಹಿತಿ, ಬೆಳೆ ಸಮೀಕ್ಷೆಯಲ್ಲಿ ದಾಖಲೆ ಸರಿಪಡಿಸಿಕೊಂಡು ಬರುವ ವೇಳೆಗೆ ನೋಂದಣಿಯಲ್ಲಿ ತಾಂತ್ರಿಕ ಸಮಸ್ಯೆ, ಜತೆಗೆ ನಿಗದಿತ ಪ್ರಮಾಣದ ಖರೀದಿ ರಾಜ್ಯದಲ್ಲಿ ಮುಗಿದಿದೆ ಎಂಬ ಮಾಹಿತಿಯಿಂದ ರೈತರು ಮನೆಗೆ ವಾಪಸ್ ತೆರಳುತ್ತಿದ್ದಾರೆ. ಸರ್ಕಾರ 3377 ರೂ.ಗೆ ಕ್ವಿಂಟಾಲ್ ರಾಗಿ ಖರೀದಿ ಮಾಡಿದರೆ ಒಂದಷ್ಟು ಲಾಭ ಸಿಗುತ್ತದೆ ಎಂಬ ಆಸೆ ರೈತನಲ್ಲಿ ಕಮರಿಹೋಗಿದೆ. ಕಳೆದ 2 ದಿನಗಳಿಂದ ರಾಗಿ ಖರೀದಿ ನೋಂದಣಿ ಆರಂಭವಾಗಿದ್ದು, 120 ರೈತರು ನೋಂದಣಿ ವೇಳೆಗೆ ನಿಗದಿತ ಪ್ರಮಾಣದ ರಾಗಿ ನೋಂದಣಿ ಸ್ಥಗಿತಗೊಂಡಿದ್ದು, ಬಹುತೇಕ ರೈತರು ರಾಗಿ ಮಾರಾಟ ಮಾಡಲು ಸಾಧ್ಯವಾಗದೆ, ಖಾಸಗಿ ವ್ಯಾಪಾರಿ, ದಲ್ಲಾಳಿಗಳ ಬಲೆಗೆ ಬೀಳುವಂತಾಗಿದೆ.
ರಾಗಿ ಖರೀದಿ ಆರಂಭವಾಗಿದ್ದು, ಸರ್ಕಾರದ ನಿಯಮಾನುಸಾರ ನೋಂದಣಿ ಮಾಡಲಾಗುತ್ತಿದೆ. ಪ್ರಸ್ತುತ ಸ್ಥಗಿತಗೊಂಡಿರುವುದರಿಂದ ಮುಂದಿನ ಆದೇಶದವರೆಗೂ ಏನೂ ಮಾಡಲು ಸಾಧ್ಯವಿಲ್ಲ. ಎಸ್.ಎನ್.ವೆಂಕಟೇಶ್, ಖರೀದಿ ಅಧಿಕಾರಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಉಗ್ರಾಣ ಮುಳಬಾಗಿಲು 5 ಕ್ವಿಂಟಾಲ್ ರಾಗಿಯನ್ನು ಸರ್ಕಾರಕ್ಕೆ ಮಾರಾಟ ಮಾಡಲು ಹಲವು ಬಾರಿ ಬಂದಿದ್ದರೂ ಪ್ರಯೋಜನವಾಗಿಲ್ಲ.ಈಗ ರಾಗಿ ಖರೀದಿ ನೋಂದಣಿ ಸ್ಥಗಿತಗೊಳಿಸಿದ್ದು ನಿರಾಸೆಯನ್ನುಂಟು ಮಾಡಿದೆ. ಗೋವಿಂದಪ್ಪ, ರೈತ, ದೊಡ್ಡಗುರ್ಕಿ ಗ್ರಾಮ