ಹಾವೇರಿ: ಕಿಸಾನ್ ಸಮ್ಮಾನ್ ಯೋಜನೆಯಡಿ ಸರ್ಕಾರ 1 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ರಾಜ್ಯದ 50 ಲಕ್ಷ ರೈತರ ಖಾತೆಗೆ ಇಂದಿನಿಂದ ಹಣ ಜಮೆಯಾಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಅಗಡಿ ರೈತ ನಾಗಪ್ಪ ಬಸೇಗಣ್ಣಿ ಎಂಬುವವರ ಹೊಲದಲ್ಲಿ ಶನಿವಾರ ಆಪ್ ಮೂಲಕ ಬೆಳೆ ಸಮೀಕ್ಷೆಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ 2.10 ಕೋಟಿ ಜಮೀನು ಖಾತೆಗಳಲ್ಲಿ 1.50 ಕೋಟಿ ಖಾತೆಗಳು ಹಿಸ್ಸಾ, ಪೋಡಿಗಳಾಗಿವೆ. ಉಳಿದ ಖಾತೆಗಳ ಪೋಡಿಯಾಗದ ಕಾರಣ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಈ ಗೊಂದಲ ನಿವಾರಿಸಿ ಹೊಸ ಬೆಳೆ ಸಮೀಕ್ಷೆ ಜಾರಿಗೊಳಿಸಲಾಗಿದೆ ಎಂದರು. ಹಿಸ್ಸಾವಾರು ಅಣ್ಣ, ತಮ್ಮಂದಿರು ತಮಗೆ ಬಂದ ಜಮೀನಿನಲ್ಲಿ ಬೆಳೆದ ಬೆಳೆಯ ಫೋಟೋ ತೆಗೆದು ಮೊಬೈಲ್ ಆಪ್ನಲ್ಲಿ ಅಪ್ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಮೊಬೈಲ್ ಇಲ್ಲದ ರೈತರಿಗೆ ಖಾಸಗಿ ಪ್ರತಿನಿಧಿಗಳು ನೆರವು ನೀಡಲಿದ್ದಾರೆ ಎಂದರು.
ಬಾಕಿ ಬೆಳೆವಿಮೆ ಪರಿಹಾರ: 2019-20ನೇ ಸಾಲಿನ ಬೆಳೆವಿಮೆ ವ್ಯತ್ಯಯದ ಸಮಸ್ಯೆ ಸಂಪೂರ್ಣ ನಿವಾರಿಸಲಾಗಿದೆ. ಆ. 18ರಂದು ರೈತರ ಖಾತೆಗೆ ಡಿಬಿಟಿ ಮೂಲಕ ಹಣ ಜಮೆಯಾಗಲಿದೆ. 2015-16ನೇ ಸಾಲಿನ ಬೆಳೆಯ ವ್ಯತ್ಯಯದಿಂದ ಬ್ಯಾಡಗಿ ತಾಲೂಕು ಮೊಟೇಬೆನ್ನೂರ ಹೋಬಳಿಯ ರೈತರ 1.94 ಕೋ.ರೂ., 5.24 ಕೋ.ರೂ. ಬೆಳೆವಿಮೆ ಬಾಕಿ ಪಾವತಿ ಸಮಸ್ಯೆ ಪರಿಹರಿಸಲಾಗಿದೆ. 1.94 ಕೋ.ರೂ. ಬೆಳೆವಿಮೆ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 5.24 ಕೋ.ರೂ.ಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ಕೋರ್ಟ್ ಮೊರೆ ಹೋಗಿದ್ದವು. ಈ ಸಮಸ್ಯೆ ಬಗೆಹರಿಸಲಾಗಿದ್ದು, ವಿಮಾ ಕಂಪನಿಗಳು ನ್ಯಾಯಾಲಯದಿಂದ ಪ್ರಕರಣ ಹಿಂಪಡೆಯಲು ಒಪ್ಪಿಗೆ ಸೂಚಿಸಿವೆ. ಇದು ಬಗೆಹರಿದರೆ ಬೆಳೆವಿಮೆಯ ಎಲ್ಲ ಸಮಸ್ಯೆಗಳು ಇತ್ಯರ್ಥವಾಗಲಿವೆ ಎಂದರು. ಏಪ್ರಿಲ್ನಿಂದ ಜುಲೈವರೆಗೆ 72,200 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರದ ಬೇಡಿಕೆಗೆ ಈವರೆಗೆ 82,856ಮೆಟ್ರಿಕ್ ಟನ್ ಗೊಬ್ಬರ ಹಂಚಿಕೆ ಮಾಡಲಾಗಿದೆ. 10,656 ಮೆಟ್ರಿಕ್ ಟನ್ ಗೊಬ್ಬರವನ್ನು ನಿಗದಿತ ಗುರಿಗಿಂತ ಹೆಚ್ಚುವರಿಯಾಗಿ ವಿತರಿಸಲಾಗಿದೆ. ಈಗಲೂ ಸಹ ಬೇಡಿಕೆಗೆ ತಕ್ಕಂತೆ ಗೊಬ್ಬರವನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಕೃತಕ ಅಭಾವ ಸೃಷ್ಟಿಸುವವರ ಹಾಗೂ ಹೆಚ್ಚು ದರ ವಸೂಲಿ ಮಾಡುವವರ ಮೇಲೆ ಕೃಷಿ ಇಲಾಖೆ ಜಾಗೃತ ದಳ ನಿಗಾವಹಿಸಿದೆ ಎಂದರು. ಶಾಸಕ ನೆಹರು ಓಲೇಕಾರ, ಬಸವರಾಜ ಶಿವಣ್ಣನವರ, ಬಿ. ಮಂಜುನಾಥ, ಸ್ಪೂರ್ತಿ, ಕರಿಯಲ್ಲಪ್ಪ, ರೈತ ಪ್ರತಿನಿಧಿಗಳಿದ್ದರು.