ಜಿಲ್ಲೆ

ರೈತರ ಕೆಲಸ ತ್ವರಿತವಾಗಿ ಮಾಡಿ

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ಗ್ರಾಮೀಣ ಭಾಗದ ರೈತರನ್ನು ಪದೇಪದೆ ಸರ್ಕಾರಿ ಕಚೇರಿಗಳಿಗೆ ಅಲೆಸುವುದನ್ನು ಬಿಟ್ಟು ತ್ವರಿತವಾಗಿ ಕೆಲಸ ಮಾಡಬೇಕು ಎಂದು ಶಾಸಕ ಎನ್.ಶ್ರೀನಿವಾಸ್ ತಾಕೀತು ಮಾಡಿದರು.

ಗೊಲ್ಲಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಶಾಸಕರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಜನ ಸಾಮಾನ್ಯರಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ಕರ್ತವ್ಯವಾಗಿದ್ದು, ಅವರ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಸ್ವೀಕಾರ ಮಾಡಿ, ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಸಕರ ನಡೆ ಹಳ್ಳಿಯ ಕಡೆ ಎಂಬ ವಿಭಿನ್ನ ಕಾರ್ಯಕ್ರಮವಾಗಿದ್ದು, ಅಧಿಕಾರಿಗಳು ತ್ವರಿತಗತಿಯಲ್ಲಿ ಜನರ ಕೆಲಸ ಮಾಡಬೇಕು ಎಂದರು.

ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ವೇಳೆ ಆ ಗ್ರಾಮದ ಸಮಸ್ಯೆಗಳನ್ನು ತಿಳಿದು ಸ್ಥಳದಲ್ಲೇ ಪರಿಹಾರ ಒದಗಿಸುತ್ತಿದ್ದೇನೆ. ಕ್ಷೇತ್ರದಾದ್ಯಂತ ಪ್ರತಿಯೊಂದು ಗ್ರಾಮದಲ್ಲೂ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸುವ ಕಾರ್ಯ ಮಾಡಲಾಗುವುದು. ಗೊಲ್ಲಹಳ್ಳಿ ಸರ್ವತೋಮುಖ ಅಭಿವೃದ್ಧಿಗೆ 1 ಕೋಟಿ ರೂ.ವಿಶೇಷ ಅನುದಾನ ನೀಡಲಾಗಿದೆ. ನನ್ನಂತೆಯೇ ಪ್ರತಿಯೊಬ್ಬ ಅಧಿಕಾರಿಯೂ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕಿದೆ. ಯಾವುದೇ ಪಕ್ಷ ಬೇಧವಿಲ್ಲದೆ ಅಧಿಕಾರಿಗಳು ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಎಸ್.ಮಲ್ಲಯ್ಯ ಮಾತನಾಡಿ, ರೈತರು ಸಮಸ್ಯೆಗಳನ್ನ ಶಾಸಕರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಗ್ರಾಪಂ ಮಟ್ಟದಲ್ಲಿ ಕುಂದುಕೊರತೆ ಸಭೆ ಏರ್ಪಡಿಸಿ ಸಾರ್ವಜನಿಕರ ಆರ್ಜಿಗೆ ಅದಷ್ಟು ಶೀಘ್ರ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಬ್ಬರ ಸಹಕಾರ ಅತ್ಯಂತ ಮುಖ್ಯವಾಗಿದೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಸೌಭಾಗ್ಯಮ್ಮ, ಸದಸ್ಯ ರಾಜಶೇಖರ್, ಅನುಸೂಯಾ ಮಲ್ಲಯ್ಯ, ಸುಜಾತಾ, ಪದ್ಮಾವತಿ, ಸೋಮಶೇಖರ್, ಲಕ್ಷ್ಮೀದೇವಿ, ಪಿಡಿಒ ರೇಖಾ, ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಮುಖಂಡ ಮಂಜುನಾಥ್, ಅಶ್ವತ್ಥ್, ಶಾಂತರಾಜು ಇದ್ದರು.

ಸಾರ್ವಜನಿಕರ ಸಮಸ್ಯೆ: ಗೊಲ್ಲಹಳ್ಳಿ ಕಾಲನಿ ಸಮೀಪ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆ ಹಾಗೂ ನಿಲ್ದಾಣ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ಚರಂಡಿ, ರಾಜುಕಾಲುವೆ ನಿರ್ಮಾಣ, ಗೊಲ್ಲಹಳ್ಳಿ ಹಾಗೂ ಅರ್ಜುನಬೆಟ್ಟಹಳ್ಳಿಗೆ ಸಂಪರ್ಕ ಕಲ್ಪಿಸುವ ಸರ್ಕಾರಿ ನಕಾಶೆ ರಸ್ತೆ ನಿರ್ಮಾಣ, ಸನ್ಮಾನ ರಸ್ತೆ ಸೇರಿ ಗ್ರಾಪಂ ಇ-ಖಾತಾ ಮಾಡಲು ಅಧಿಕಾರಿಗಳ ವಿಳಂಬ ಸೇರಿ ವಿವಿಧ ಸಮಸ್ಯೆಗಳನ್ನು ಕುರಿತು ಸಾರ್ವಜನಿಕರು ಹಾಗೂ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. ಅದಷ್ಟು ಬೇಗ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಶಾಸಕ ಎನ್.ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದರು.