ಬೇಲೂರು: ಇತ್ತೀಚಿನ ದಿನಗಳಲ್ಲಿ ತಾಲೂಜು ಕಚೇರಿಯಲ್ಲು ರೈತರ, ಕೂಲಿ ಕಾರ್ಮಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿ ಬರುತಿದ್ದು, ತಹಸೀಲ್ದಾರರು ಈ ಬಗ್ಗೆ ಗಮನ ಹರಿಸಿ ಕೆಲಸ ಮಾಡಿಸಲು ಮುಂದಾಗಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ತಾಲೂಕಿನ ಕನಾಯಕನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಜಮೀನಿನ ಸಾಗುವಳಿಗಾಗಿ ಹಾಕಿರುವ ಅರ್ಜಿಗಳ ವಿಲೇವಾರಿ ವಿಳಂಭವಾಗುತ್ತಿದೆ ಎಂಬ ಆರೋಪವಿದೆ. ಅಲ್ಲದೆ ಕಳೆದ ಸಾಲಿನಲ್ಲಿ ಕೆಲ ಅಧಿಕಾರಿಗಳ ತಪ್ಪಿನಿಂದ ಬಡವರು ಮತ್ತು ದೀನ ದಲಿತರಿಗೆ ಸಿಗಬೇಕಾದ ಭೂಮಿ ಉಳ್ಳವರ ಪಾಲಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರಣ ನಮ್ಮ ಸಮಿತಿ ಸೂಕ್ತವಾಗಿ ದಾಖಲೆಗಳನ್ನು ಪರಿಶೀಲಿಸಿಸಾಗುವಳಿ ವಿತರಣೆಯನ್ನು ತಾತ್ಕಾಲಿಕವಾಗಿ ತಡೆದಿದ್ದರಿಂದ ಮಾತ್ರ ವಿಳಂಭವಾಗುತ್ತಿದೆ. ಈಗಾಗಲೇ ನಾನು ಈ ಸಂಬಂಧ ಜಿಲ್ಲಾಧಿಕಾರಿಗಳಲ್ಲಿ ಮಾತನಾಡಿದ್ದು ತ್ವರಿತ ವಿಲೇವಾರಿಗೆ ಕ್ರಮ ವಹಿಸಲಾಗುವುದು. ಕಂದಾಯ ಇಲಾಖೆಗೆ ಬರುವ ಪ್ರತಿ ಸಾರ್ವಜನಿಕರ ಕೆಲಸಗಳನ್ನು ಅಧಿಕಾರಿಗಳು, ಸಿಬ್ಬಂದಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಮತ್ತು ಕನಾಯಕನಹಳ್ಳಿ ಗ್ರಾಮಕ್ಕೆ ಈಗಾಗಲೇ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಇನ್ನುಳಿದ ಅಭಿವೃದ್ಧಿ ಕೆಲಸಗಳನ್ನು ಮಾಟಿಅಲು ನಾನು ಬದ್ದನಾಗಿದ್ದೇನೆ.
ಜತೆಗೆ ಬೇಲೂರು ಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಿಗೆ ಒಂದಲ್ಲ ಒಂದು ಅನುದಾನ ತಂಸು ಕಾಮಗಾರಿ ಮಾಡಿಸಲಾಗಿದೆ. ಆದರೆ ನಾನು ಅನುದಾನ ನೀಡದ ಗ್ರಾಮಕ್ಕೆ ಹೋಗಿ ಮತ ಕೇಳಲ್ಲ. ಬೇಲೂರು ಕ್ಷೇತ್ರದ ಅಭಿವೃದ್ಧಿ ನನಗೆ ತೃಪ್ತಿ ತಂದಿದೆ. ಹಾಗೂ ನಾನು ವಿರೋಧ ಪಕ್ಷದವನಾಗಿದ್ದರೂ ಸರ್ಕಾರದಿಂದ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡಿಸಲಾಗುವುದು. ಎಲ್ಲ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳು ಸರಿಯಾಗಿ ಅರ್ಹ ಫಲಾನೂಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.
ಜೆಡಿಎಸ್ ಮುಖಂಡ ಕನಾಯಕನಹಳ್ಳಿ ಮಹಾದೇವ ಮಾತನಾಡಿ, ಯಗಚಿ ಜಲಾಶಯ ನಿರ್ಮಾಣದ ಸಂದರ್ಭ ಕನಾಯಕನಹಳ್ಳಿ ಗ್ರಾಮಸ್ಥರು ತಮ್ಮ ಅಮೂಲ್ಯ ಭೂಮಿ ಕಳೆದು ಕೊಂಡು ಇಲ್ಲಿಗೆ ಬಂದು ವಾಸವಾಗಿದ್ದರೂ ಕಂದಾಯ ಇಲಾಖೆಯಿಂದ ನಮ್ಮ ಬಹುತೇಕ ದಾಖಲಾತಿಗಳು ಇನ್ನು ಬದಲಾವಣೆಯಾಗಿಲ್ಲ. ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡೆ ಹರಿದು ಹಂಚಿದ ಭೂಮಿ ಮತ್ತು ಮನೆ ನಿವೇಶನವನ್ನು ಒಂದೇ ಕಡೆ ಸೇರಿಸುವ ಮೂಲಕ ಗ್ರಾಮಸ್ಥರಿಗೆ ಸಹಕಾರ ನೀಡಬೇಕು. ಸೂಕ್ತ ದಾಖಲಾತಿ ಇಲ್ಲದೆ ಸರ್ಕಾರಿ ಸೌಲಭ್ಯ ದೊರೆಯುತ್ತಿಲ್ಲ, ಇನ್ನೂ ವಿ ಸೆಸ್ಕ್ ನಿಂದ ಭಾರಿ ತೊಂದರೆಯಾಗುತ್ತಿದೆ. ಶಾಸಕ ಕೆ.ಎಸ್.ಲಿಂಗೇಶ್ ರವರು ಕನಾಯಕನಹಳ್ಳಿ ಗ್ರಾಮಕ್ಕೆ ಸಾಕಷ್ಟು ಅನುದಾನ ನೀಡಿ, ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಿದ್ದು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ತಹಶೀಲ್ದಾರ್ ರಮೇಶ್ ಮಾತನಾಡಿ, ಪ್ರತಿ ತಿಂಗಳು ನಡೆಯುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವು ಕನಾಯಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದರಿಂದ ಹಲವಾರು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ಸಹಕಾರಿಯಾಗಿದೆ. ಒಟ್ಟು ೨೯ ಅರ್ಜಿಗಳಲ್ಲಿ ಕಂದಾಯ ಇಲಾಖೆಗೆ ೨೩, ಸರ್ವೆಗೆ ೧, ಆರ್ ಡಿಪಿಆರ್ ೪ ಮತ್ತು ಸೆಸ್ಕ್ ಗೆ ಸಂಬಂಧಿಸಿದ ಅರ್ಜಿಗಳಿಗೆ ಸಕಾಲದಲ್ಲಿ ಪರಿಹಾರ ಒದಗಿಸಲಾಗಿದೆ. ಇನ್ನುಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ
ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮತ್ತು ಸಾರ್ವಜನಿಕರು ಸಹ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮಗಾಗ ಬೇಕಾದ ಕೆಲಸ ಕಾರ್ಯಗಳ ಬಗ್ಗೆ ಅರ್ಜಿಗಳ ಮೂಲಕ ಮನವಿ ಸಲ್ಲಿಸಿದರು.
ತಾಲೂಕು ಪಂಚಾಯತಿ ಇಒ ಸುನಿತಾ, ಬಂಟೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಂಜಿತಾ, ಉಪಾಧ್ಯಕ್ಷ ದಾಸಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಘು, ಪ್ರಸನ್ನ, ಪಿಡಿಒ ರಾಜಶೇಖರ, ಗ್ರಾಪಂ ಸದಸ್ಯರಾದ ಸುಧಾ, ಶಿವಮ್ಮ, ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರಿದ್ದರು.