ಮಂಡ್ಯ : ನಾಡಿನ ರೈತರ ಉಳಿವಿಗಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಅನಿವಾರ್ಯವಾಗಿದ್ದು, ಕ್ಷೇತ್ರದಲ್ಲಿ ಕಾರ್ಯಕರ್ತರು ಸಂಘಟಿತರಾಗಿ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್ ಮನವಿ ಮಾಡಿದರು.
ಮಳವಳವಳ್ಳಿ ಪಟ್ಟಣದ ಮೂಸೂರು ರಸ್ತೆಯಲ್ಲಿ ತೆರೆಯಲಾಗಿರುವ ಪಕ್ಷದ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಈ ಇಳಿ ವಯಸ್ಸಿನಲ್ಲೂ ಹೋರಾಟ ನಡೆಸುತ್ತಿದ್ದಾರೆ. ಅನಾರೋಗ್ಯವನ್ನೂ ಲೆಕ್ಕಿಸದೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನ್ನದಾತರ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ಸುಸ್ಥಿರ ಬದುಕು ಕಟ್ಟಿಕೊಡುವುದು ಇದರ ಉದ್ದೇಶವಾಗಿದೆ. ಉತ್ತಮ ಯೋಜನೆಗಳನ್ನು ತರಬೇಕೆನ್ನುವುದು ಅವರ ಹಂಬಲವಾಗಿದೆ. ಅವರ ಕನಸು ಸಾಕಾರವಾಗಲು ಪೂರ್ಣ ಬಹುಮತ ಅವಶ್ಯವಿದೆ. ಅದಕ್ಕಾಗಿ ಕಾರ್ಯಕರ್ತರು ಸಂಘಟಿತರಾಗಿ ದುಡಿದು ಅಭ್ಯರ್ಥಿ ಗೆಲುವಿಗೆ ಸಹಕಾರ ನೀಡಬೇಕೆಂದು ಕೋರಿದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ಮಳವಳ್ಳಿ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಅನ್ನದಾನಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಕಳುಹಿಸಿದರೆ ಅವರು ಸಚಿವರಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.
ಪುರಸಭೆ ಉಪಾಧ್ಯಕ್ಷ ಪ್ರಶಾಂತ್, ಸದಸ್ಯರಾದ ಟಿ.ನಂದಕುಮಾರ್, ನೂರುಲ್ಲಾ, ಸಿದ್ದರಾಜು, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಿದ್ದಾಚಾರಿ, ಯುವ ಘಟಕದ ಅಧ್ಯಕ್ಷ ಚಂದಳ್ಳಿ ಶ್ರೀಧರ್, ಟೌನ್ ಅಧ್ಯಕ್ಷ ಪ್ರಭು, ಮುಖಂಡರಾದ ಎಂ.ಎಚ್.ಕೆಂಪಯ್ಯ, ಮಹೇಶ್, ನಾರಾಯಣ, ರಾಜೇಶ್, ಜ್ಯೂಸ್ ಮಹೇಶ್, ಕೆಂಪಣ್ಣ, ಅಂಕರಾಜು ಇತರರಿದ್ದರು.