ಬಾಗಲಕೋಟೆ: ರೈತರ ಜಮೀನಿನ ಅವಶ್ಯಕತೆಗನುಗುಣವಾಗಿ ಬೀಜ ಗೊಬ್ಬರ ಕೀಟನಾಶಕಗಳನ್ನು ವಿತರಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ ವಿತರಕರಿಗೆ ಸೂಚಿಸಿದರು.
ನವನಗರದ ಜಂಟಿ ನಿರ್ದೇಶಕರು ಕೃಷಿ ಇಲಾಖೆಯ ಕಚೇರಿಯಲ್ಲಿ ಸೋಮವಾರ ನಡೆದ ವಿತರಕರರು ಹಾಗೂ ಮಾರಾಟಗಾರರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು ೩೧೦೫೯೯ ಹೆಕ್ಟೇರ್ ಗಳಲ್ಲಿ ಹಂಗಾಮಿನಲ್ಲಿ ವಿವಿದ ಬೆಳೆಗಳನ್ನು ಬೆಳೆಯಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಪೈಕಿ ಈಗಾಗಲೇ ಕಬ್ಬು ಸುಮಾರು ೧೦೨೦೦೦ ಹೆಕ್ಟೇರ್ ನಲ್ಲಿ ಬೆಳೆಯಲಾಗಿದ್ದು, ಶೇ೩೦ ರಷ್ಟು ಬಿತ್ತನೆಯಾಗಿರುತ್ತದೆ ಎಂದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ಅವಶ್ಯಕ ಬೀಜ ಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಹೆಸರು, ತೊಗರಿ ಉದ್ದು, ಸೋಯಾ ಅವರೆ, ಸಜ್ಜೆ ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಗಳ ಒಟ್ಟು ೨೧೭೦ ಕ್ವಿಂಟಲ್ ನಷ್ಟು ಬಿತ್ತನೆ ಬೀಜ ಸಂಗ್ರಹ ಮಾಡಲಾಗಿದ್ದು, ರೈತರಿಗೆ ವಿತರಣೆ ಕಾರ್ಯ ಪ್ರಾರಂಭಿಸಲಾಗಿದೆ. ರೈತರಿಗೆ ಬಿತ್ತನೆ ಬೀಜಗಳನ್ನು ಅವಶ್ಯಕತೆಗೆ ಅನುಗುಣವಾಗಿ ವಿತರಣೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅವಶ್ಯಕ ರಸಗೊಬ್ಬರ ದಾಸ್ತಾನು ಇದ್ದು, ರೈತ ಬಾಂಧವರು ಒಂದು ಮತ್ತು ಎರಡು ಪೋಷಕಾಂಶ ಇರುವ ಗೊಬ್ಬರವನ್ನು ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರ ಬಳಸಬೇಕು ಎಂದು ಮನವಿ ಮಾಡಿದರು. ರೈತ ಬಾಂಧವರು ಅಧೀಕೃತ ಕೃಷಿ ಮಾರಾಟಗಾರರದಿಂದ ಖರೀದಿ ಮಾಡಿ ರಸೀದಿ ಪಡೆಯಬೇಕು. ಅನಧೀಕೃತ, ಕಲಬರಕೆ, ನಕಲಿ ಕೃಷಿ ಪರಿಕರ ಮಾರಾಟ ಕಂಡು ಬಂದಲ್ಲಿ ರೈತ ಕರೆ ಕೇಂದ್ರ ೧೮೦೦೪೨೫೩೫೫೩ ಕರೆ ಮಾಡಿ ಮಾಹಿತಿ ನೀಡಲು ತಿಳಿಸಿದರು.
ವೇದಿಕೆಯ ಮೇಲೆ ಜಿಲ್ಲಾ ಕಾರ್ಯದರ್ಶಿ ಪ್ರಭು ಇದ್ದಲಗಿ, ಜಿಲ್ಲಾ ಕೃಷಿ ಉಪನಿರ್ದೇಶಕ ಆರ್.ಎಂ.ರೂಡಗಿ ಹಾಜರಿದ್ದರು.
ಸಭೆಯಲ್ಲಿ ಜಿಲ್ಲೆಯ ೫೦ ಕ್ಕೂ ಹೆಚ್ಚು ವಿತರಕರು, ಮತ್ತು ೩೦ ಕ್ಕೂ ಹೆಚ್ಚು ಕೆಮಿಕಲ್ ಡಿಸ್ಟಿçಬೂಟರ್, ಸಂಗದ ಸದಸ್ಯರುಗಳು ಹಾಜರಿದ್ದರು.