ಹುಳಿಯಾರು: ರಾಜಕಾರಣಿಗಳೆಲ್ಲರೂ ನಾವು ರೈತರ ಮಕ್ಕಳು, ನಮ್ಮನ್ನು ಗೆಲ್ಲಿಸಿದರೆ ರೈತ ಪರ ಆಡಳಿತ ನಡೆಸುವುದಾಗಿ ಹೇಳುತ್ತಾರೆ. ಗೆದ್ದ ನಂತರ ಕಾರ್ಪೊರೇಟ್ ಕಂಪನಿಗಳ ಪರ ನಿಂತು ರೈತರನ್ನು ಕಡೆಗಣಿಸುತ್ತಾರೆ. ಹಾಗಾಗಿ ರೈತರು ಪಕ್ಷ, ಜಾತಿ ಬಿಟ್ಟು ರೈತ ಸಂಘದ ಮೂಲಕ ಸಂಘಟಿತರಾದಾಗ ಮಾತ್ರ ರೈತ ಪರವಾದ ಸರ್ಕಾರ ಮಾಡಲು ಸಾಧ್ಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಕರೆ ನೀಡಿದರು.
ಹುಳಿಯಾರಿನ ವಾಲ್ಮೀಕಿ ಸರ್ಕಲ್ನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಸರ್ಕಾರಿ ನೌಕರರು, ಜಾತಿಪರ, ವೃತಿಪರ ಸಂಘಟನೆಗಳು ಸಂಘಟನೆಯ ಮಹತ್ವ ಅರಿತು ಸಂಘಟಿತರಾಗಿ ತಮ್ಮ ಪಾಲಿನ ಹಕ್ಕಿಗಾಗಿ ಹೋರಾಟ ರೂಪಿಸಿ ಸರ್ಕಾರಗಳ ಕಿವಿ ಹಿಂಡಿ ಕೆಲಸ ಮಾಡಿಸಿಕೊಳ್ಳುತ್ತಿವೆ. ಆದರೆ ದೇಶಕ್ಕೆ ಅನ್ನ ಕೊಡುವ ಶೇ.70ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ರೈತರು ಅಸಂಘಟಿತರಾಗಿದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ರೈತನನ್ನು ಅವಲಂಬಿಸಿಸಿದ್ದರೂ ಆತನ ಪರ ಮಾತ್ರ ನಿಲ್ಲದೆ ರ್ನಿಲಕ್ಷ್ಯಿಸುತ್ತಿದ್ದಾರೆ. ಪರಿಣಾಮ ರಾಜ್ಯ ಮತ್ತು ರಾಷ್ಟ್ರದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಯಾಗುತ್ತಿವೆ. ಈ ಅನ್ಯಾಯ ತಡೆಯಲು ರೈತರು ಸಂಘಟಿತ ಹೋರಾಟಕ್ಕೆ ಸಿದ್ಧರಾಗಬೇಕು ಎಂದರು.
ರೈತರ ಸಾಲಮನ್ನಾ ಮಾಡಲು ಹಿಂದೇಟು ಹಾಕುವ ಸರ್ಕಾರ, ಕಾಪೋರ್ರೇಟ್ ಸಂಸ್ಥೆಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುತ್ತಾರೆ. ಕೃಷಿಗೆ ಸಮರ್ಪಕವಾಗಿ ವಿದ್ಯುತ್ ನೀಡದೆ ಕಾರ್ಖಾನೆಗಳಿಗೆ 24 ಗಂಟೆ ನೀಡುತ್ತಿವೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಕೊಡದೆ ಅಗತ್ಯ ವಸ್ತುಗಳ ಬೆಲೆ ಮಾತ್ರ ಏರಿಸುತ್ತಿದ್ದಾರೆ. ಬೆಳೆ ವಿಮೆ ಪರಿಹಾರ ಕೊಡಲು ವಿಳಂಬ, ಮೀನಮೇಷ, ನಫೆಡ್ ಕೇಂದ್ರ ತೆರೆಯಲು ತಾತ್ಸಾರ, ಬಗರ್ ಹುಕುಂ ಸಾಗುವಳಿ ಚೀಟಿ ಕೊಡಲು ಲಂಚ ಹೀಗೆ ಒಂದೇ ಎರಡೇ. ರೈತರಿಗಾಗುತ್ತಿರುವ ಅನ್ಯಾಯ ಪಟ್ಟಿ ಮಾಡಿದರೆ ಆಂಜನೇಯನ ಬಾಲದಂತೆ ಬೆಳೆಯುತ್ತದೆ. ಈಗ ಮತ್ತೆ ರೈತರು ಒಗ್ಗೂಡುವ ಅಗತ್ಯವಿದೆ. ಹಳ್ಳಿಹಳ್ಳಿಗಳಲ್ಲಿ ರೈತ ಸಂಘ ಸ್ಥಾಪಿಸುವ ಅನಿವಾರ್ಯತೆ ನಿಮಾರ್ಣವಾಗಿದೆ ಎಂದರು. ಮುಖಂಡರಾದ ಅಗಸರಹಳ್ಳಿ ಗ್ರಾಮದ ಎ.ಆರ್.ಮಲ್ಲೇಶಯ್ಯ, ಎ.ಎಸ್.ಶಶಿಧರ್, ಕುಮಾರಸ್ವಾಮಿ, ದೊಡ್ಡಯ್ಯ, ನರಸಿಂಹಮೂರ್ತಿ,ಎ.ಎಸ್.ಉಮೇಶ್, ನಂದಿಹಳ್ಳಿ ಗ್ರಾಮದ ಎನ್.ಆರ್.ನಾಗರಾಜು, ಡಿ.ಬಿದರೆ ಮಂಜಣ್ಣ ಇದ್ದರು.